ತಣ್ಣೀರುವಾಬಿ ಬೀಚ್‌ನಲ್ಲಿ ಗಾಳಿಪಟಗಳ ಚಿತ್ತಾರ: ದೇಶ ವಿದೇಶದ ದೈತ್ಯಗಾತ್ರ- ಬಣ್ಣ- ವಿನ್ಯಾಸಗಳ ಸಂಗಮ

ಮಂಗಳೂರು, ಜ.17: ಕಣ್ಣು ಹಾಯಿಸಿದಷ್ಟುದ್ದಕ್ಕೂ ನೀಲ ಬಣ್ಣದ ಕಡಲ ಅಲೆಗಳು ಒಂದೆಡೆಯಾದರೆ, ನೀಲ ಆಗಸ ದಲ್ಲಿ ಬಣ್ಣಬಣ್ಣದ, ವಿವಿಧ ನಮೂನೆಯ ಚುಕ್ಕಿಯಾಕಾರದಿಂದ ಹಿಡಿದು ದೈತ್ಯಗಾತ್ರದ ಗಾಳಿಪಟಗಳ ಚಿತ್ತಾರ. ಮೀನು, ಬೆಕ್ಕು, ಆನೆ, ಚಿಟ್ಟೆ, ಮೊಸಳೆ, ಹೂ, ಮಿಕ್ಕಿ, ಏಲಿಯನ್ ... ಹೀಗೆ ವಿವಿಧ ಬಗೆಯ ವಿವಿಧ ವಿನ್ಯಾಸ ಬಣ್ಣಗಳ ಸಂಗಮದ ಗಾಳಿಪಟಗಳು. ಇನ್ನು ಕಡಲ ಕಿನಾರೆಯ ಮರಳಿನ ಮೇಲೆ ಭಾರೀ ಗಾತ್ರದ ಗಾಳಿಪಟಗಳ ಸೂತ್ರವನ್ನು ಸಮತೂಗಿಸಿಕೊಂಡು ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಅಂತಾರಾಷ್ಟ್ರೀಯ ಗಾಳಿಪಟಗಾರರು ಹಾಗೂ ಅವರಿಗೆ ಪ್ರೋತ್ಸಾಹ ನೀಡುವ ಸಾವಿರಾರು ಸಂಖ್ಯೆಯ ಗಾಳಿಪಟ ಪ್ರೇಮಿಗಳು, ಪ್ರೇಕ್ಷಕರು.
ಇದು ಮಂಗಳೂರಿನ ತಣ್ಣೀರುಬಾವಿಯ ಬ್ಲೂಬೇ ಬೀಚ್‌ನಲ್ಲಿ ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಲಾಗಿ ರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದದ ಮೊದಲ ದಿನವಾದ ಶನಿವಾರ ಕಂಡು ಬಂದ ದೃಶ್ಯ.
ಟೀಮ್ ಮಂಗಳೂರು ತಂಡದಿಂದ ಎರಡು ದಿನಗಳ ಕಾಲ ನಡೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ದಲ್ಲಿ 15 ದೇಶಗಳ 30 ಮಂದಿ ಅಂತಾರಾಷ್ಟ್ರೀಯ ಗಾಳಿಪಟಗಾರರ ಜತೆಗೆ 62 ನುರಿತ ಗಾಳಿಪಟ ಹಾರಾಟ ಗಾರರು ತಮ್ಮ ವೈವಿಧ್ಯಮಯ ಗಾಳಿಪಟಗಳನ್ನು ಪ್ರದರ್ಶಿಸುತ್ತಿದ್ದಾರೆ.
ಸಾಂಪ್ರದಾಯಿಕ, ಏರೋಫಾಯಿಲ್, ಇನ್‌ಪ್ಲೇಟಬಲ್ ಹಾಗೂ ಕ್ಲಾಡ್ ಲೈನ್ ಸ್ಪೋರ್ಟ್ ಗಾಳಿಪಟಗಳ ಜತೆಗೆ ಸ್ಥಳೀಯ ಸಾಂಪ್ರದಾಯಿಕ ಗಾಳಿಪಟಗಳು ಉತ್ಸವದಲ್ಲಿ ನೋಡುಗರನ್ನು ಆಕರ್ಷಿಸುತ್ತಿವೆ.
ಉತ್ಸವ ಮುಂದುವರಿಸಲು ಪ್ರೇರಣೆ: ಯು.ಟಿ.ಖಾದರ್
ಗಾಳಿಪಟ ಹಾರಿಸುವ ಮೂಲಕ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಕರಾವಳಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ 2 ಕೋಟಿ ರೂ. ಅನುದಾನ ಒದಗಿಸಿದ್ದು ಅತ್ಯಂತ ಯಶಸ್ವಿಯಾಗಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ದೇಶ ವಿದೇಶಗಳಿಂದ ಪ್ರವಾಸಿಗರು, ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಇಂತಹ ಉತ್ಸವ ಮುಂದೆಯೂ ಯೋಜಿಸಲು ಪ್ರೇರಣೆ ದೊರಕಿದೆ ಎಂದರು.
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
‘ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಗಾಳಿಪಟ ಉತ್ಸವದಲ್ಲಿ ಪತ್ನಿ ಜತೆ ಭಾಗವಹಿಸುತ್ತಿದ್ದೇನೆ. ಹೈದರಾ ಬಾದ್‌ನಿಂದ ಇಂದು ಬೆಳಗ್ಗೆ ತಣ್ಣೀರುಬಾವಿಗೆ ಆಗಮಿಸಿದ್ದು, ಇಲ್ಲಿನ ಜನರಿಂದ ಉತ್ತಮ ಸ್ಪಂದನೆ ದೊರಕಿದೆ. ತುಂಬಾ ಸ್ನೇಹಮಯಿ ಜನರು. ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಾರೆ, ಮಾತನಾಡಿಸುತ್ತಾರೆ. ನಾನು ಇಲ್ಲಿ ಸುರಕ್ಷಿತವಾಗಿರುವ ಭಾವನೆ ಬಂದಿದೆ’ ಎಂದು ಇಟಲಿಯ ಅಂತಾರಾಷ್ಟ್ರೀಯ ಗಾಳಿಪಟಗಾರ ಆ್ಯಂಡ್ರಿಯಾ ಹೇಳಿದರು.
ಪತ್ನಿ ಸಬ್ರೀನಾ ಜತೆಗೆ 24 ಬೃಹತ್ ಗಾಳಿಪಟಗಳೊಂದಿಗೆ ಉತ್ಸವಕ್ಕೆ ಆಗಮಿಸಿರುವ ಆ್ಯಂಡ್ರಿಯಾ ಅವರ ಜೆಲ್ಲಿ ಫಿಶ್, ಏಲಿಯನ್, ಫಿಸ್ ಸ್ಕೆಲಿಟನ್, ಹೂವಿನ ದೈತ್ಯಾಕಾರದ ಗಾಳಿಪಟಗಳು 5 ಮೀಟರ್‌ನಿಂದ 25 ಮೀಟರ್ ಉದ್ದವನ್ನು ಹೊಂದಿವೆ.
ಇಸ್ತಾನಿಯಾದ ಜಾನ ಸೂಮ್ ಅವರದ್ದು ಮಂಗಳೂರಿಗೆ ಇದು 2ನೇ ಭೇಟಿಯಂತೆ. ಸುಮಾರು 14 ಗಾಳಿಪಟ ಗಳೊಂದಿಗೆ ಇಬ್ಬರ ತಂಡ ಮಂಗಳೂರಿಗೆ ಆಗಮಿಸಿರುವುದಾಗಿ ಹೇಳುವ ಜಾನ ಸೂಮ್‌ಗೆ ಇಲ್ಲಿನ ಬಿಸಿಲಿನ ವಾತಾವರಣ ಖುಷಿ ನೀಡಿದೆಯಂತೆ.
‘ನಮ್ಮಲ್ಲಿ ಮೈನಸ್ 20 ಡಿಗ್ರಿ ಹವಾಮಾನ. ಎಲ್ಲೆಲ್ಲೂ ಹಿಮತುಂಬಿರುತ್ತದೆ. ಆದರೆ ಇಲ್ಲಿಯ ಬೀಚ್‌ನ ವಾತಾವರಣ ಹಿತವಾಗಿದೆ. ಗಾಳಿಪಟ ಹಾರಾಟಕ್ಕೂ ಸೂಕ್ತ ಪ್ರದೇಶ. ಭಾರತದ ಮೀನಿನ ಆಹಾರ ತನಗೆ ಇಷ್ಟ ಎನ್ನುತ್ತಾರೆ’ ಜಾನ ಸೂಮ್.







