ಕೊಣಾಜೆ | ನರಿಂಗಾನ ಕಂಬಳೋತ್ಸವ'ದ ಪೂರ್ವಭಾವಿ ಸಭೆ

ಕೊಣಾಜೆ : ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ನಡೆಯಲಿರುವ ನಾಲ್ಕನೇ ವರ್ಷದ ಲವ-ಕುಶ ಜೋಡುಕರೆ 'ನರಿಂಗಾನ ಕಂಬಳೋತ್ಸವ'ದ ಪ್ರಯುಕ್ತ ಶುಕ್ರವಾರ ಕಂಬಳಕರೆಯ ಬಳಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಕಂಬಳ ಸಮಿತಿ ಅಧ್ಯಕ್ಷ, ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಪ್ರತೀವರ್ಷ ಕಂಬಳ ಯೋಜನೆಯಲ್ಲಿ ಅಭಿವೃದ್ಧಿ ಕಾಣುತ್ತಿದ್ದು, ಈ ಬಾರಿ ಊರಿಗೇ ಹೆಸರು ಬರುವ ರೀತಿಯಲ್ಲಿ ಸರ್ವರ ಪ್ರಶಂಸೆಗೆ ಪಾತ್ರವಾಗುವ ನಿಟ್ಟಿನಲ್ಲಿ ಕಂಬಳ ನಡೆಯಲಿದೆ. ಶಾಶ್ವತ ವೇದಿಕೆ ನಿರ್ಮಾಣ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಸರ್ವ ಧರ್ಮೀಯರನ್ನು ಒಂದೇ ವೇದಿಕೆಗೆ ತರುವ ಹಾಗೂ ದಕ್ಷಿಣ ಜಿಲ್ಲೆಯ ಇತಿಹಾಸ, ಪರಂಪರೆ ಸಾರುವ ನಿಟ್ಟಿನಲ್ಲಿ ಕಂಬಳ ಸಹಕಾರಿಯಾಗಲಿದೆ. ಈ ಬಾರಿ ರಾಜ್ಯ, ರಾಷ್ಟ್ರ ಮಟ್ಟದ ರಾಜಕೀಯ, ಧಾರ್ಮಿಕ, ಸಾಮಾಜಿಕ ಹೆಸರಾಂತ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಮಾತನಾಡಿ, ಜ.10ಕ್ಕೆ ಕಂಬಳ ನಡೆಯಲಿದ್ದು, ವೇದಿಕೆಗೆ ಹೆಚ್ಚಿನ ಖರ್ಚು ತಗಲುವುದರಿಂದ ಶಾಶ್ವತ ವೇದಿಕೆ ನಿರ್ಮಿಸಬೇಕಿದೆ. ಅದರಿಂದ ಘನತೆ ಹೆಚ್ಚಿಸಲು ಸಾಧ್ಯ. ಗಡಿನಾಡಿನಲ್ಲಿ ನಡೆಯುವ ಕಂಬಳದಲ್ಲಿ 260 ಜೋಡಿ ಕೋಣಗಳು ಬರುವುದು ವಿಶೇಷ. ಈ ಬಾರಿ ಎರಡೂ ಕಡೆ ಗ್ಯಾಲರಿ ವ್ಯವಸ್ಥೆ ಇರಲಿದೆ. ಅತಿಹೆಚ್ಚು ಬಹುಮಾನ ನೀಡುವ ಕಂಬಳ ನರಿಂಗಾನ ಕಂಬಳವಾಗಿದೆ ಎಂದು ತಿಳಿಸಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕಂಬಳ ಸಮಿತಿಯ ಉಪಾಧ್ಯಕ್ಷರುಗಳಾದ ಚಂದ್ರಹಾಸ್ ಶೆಟ್ಟಿ ಮೋರ್ಲ, ಕರುಣಾಕರ್ ಶೆಟ್ಟಿ ಮೋರ್ಲ, ಮ್ಯಾಕ್ಸಿಮ್ ಡಿಸೋಜ, ಗಿರೀಶ್ ಆಳ್ವ ಮೋರ್ಲ, ವಿಜೇಶ್ ನಾಯ್ಕ್ ನಡಿಗುತ್ತು, ಅಬ್ದುಲ್ ಜಲೀಲ್, ಜೋಸೆಫ್ ಕುಟ್ಟಿನ್ಹ, ಪ್ರೇಮಾನಂದ ರೈ, ಮುರಲೀಧರ ಶೆಟ್ಟಿ ಮೋರ್ಲ, ವೈಭವ್ ಶೆಟ್ಟಿ ತಲಪಾಡಿ, ವಿನಯ್ ಶೆಟ್ಟಿ ತಲಪಾಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ನವಾಝ್ ನರಿಂಗಾನ ಸ್ವಾಗತಿಸಿದರು.







