ಕೊಂಕಣಿ ಅಕಾಡೆಮಿಯಿಂದ ರಾಷ್ಟ್ರೀಯ ಸಂವಿಧಾನ ದಿನಾಚರಣೆ

ಮಂಗಳೂರು, ನ.27: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಮಂಗಳೂರು ಧರ್ಮಪ್ರಾಂತ್ಯದ ಶ್ರೀ ಸಾಮಾನ್ಯರ ಆಯೋಗದ ಸಹಯೋಗದಲ್ಲಿ ರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಬುಧವಾರ ಜೆಪ್ಪು ಸಂತ ಅಂತೋಣಿ ಸೇವಾ ಸಂಸ್ಥೆ ‘ಸಂಭ್ರಮ ಸಭಾಂಗಣದಲ್ಲಿ ಆಚರಿಸಲಾಯಿತು.
ಪುತ್ತೂರು ಸರಕಾರಿ ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕ ಪ್ರೊ. ಐವನ್ ಪ್ರಾನ್ಸಿಸ್ ಲೋಬೊ ಸಂವಿಧಾನ ದಿನಾಚರಣೆಯ ಮಹತ್ವವನ್ನು ವಿವರಿಸಿ, ಸಂವಿಧಾನವು ಬದಲಾಗಿಲ್ಲ ಆದರೆ ಸಂವಿಧಾನದ ತತ್ವ ಗೊತ್ತಿಲ್ಲದೇ, ಸಂವಿಧಾನದ ಅರ್ಥವನ್ನು ಬದಲಾಯಿಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿ ಮಂಗಳೂರಿನ ಖ್ಯಾತ ನ್ಯಾಯವಾದಿ ಕೆ.ಪಿ. ವಾಸುದೇವ ರಾವ್ ಅವರು ವಂ.ಸ್ವಾ. ಬೇಸಿಲ್ ವಾಸ್ರ ಕೊಂಕಣಿಯಲ್ಲಿ ರಚಿಸಿದ ‘ಸಂವಿಧಾನಶಿಲ್ಪಿ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್’ ಪುಸ್ತಕ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವೆಲ್ಲರೂ ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಬದುಕುವ ಹಕ್ಕು ನಮಗೆ ದೇವರಿಂದ ಬಂದಿದೆ ಹಾಗೂ ಮೂಲಭೂತ ಹಕ್ಕುಗಳು ಸಂವಿಧಾನದಿಂದ ಬಂದಿದೆ ಎಂದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅಧ್ಯಕ್ಷತೆ ವಹಿಸಿದ್ದರು. ಸಂವಿಧಾನ ಪೀಠಿಕಾ ಗೀತೆಯನ್ನು ಹಾಡಿ, ಸಂವಿಧಾನಕ್ಕೆ ಗೌರವ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಯಲಹಂಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸ್ಟೀವನ್ ಕ್ವಾಡ್ರಸ್ರ ಕೊಂಕಣಿಯಲ್ಲಿ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು.
ಸಮಾಜಸೇವಾ ಕ್ಷೇತ್ರದಲ್ಲಿ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೊರಿನ್ ರಸ್ಕಿನ್ಹಾ ಸನ್ಮಾನಿಸಲಾಯಿತು.
ಗೌರವ ಅತಿಥಿಗಳಾಗಿದ್ದ ಸಂತ ಅಂತೋಣಿ ಸೇವಾ ಸಂಸ್ಥೆಯ ಅಡಳಿತಾಧಿಕಾರಿ ವಂ. ಸ್ವಾ. ಪ್ರವೀಣ್ ಅಮೃತ್ ಮಾರ್ಟಿಸ್ ಅವರು ಎಡ್ವಿನ್ ಜೆ. ಎಫ್. ಡಿಸೋಜ ಬರೆದ ‘ಉಣ್ಯಾ ಭಾವಾಡ್ತಾಚೆ’ ಪುಸ್ತಕವನ್ನು ಇ- ಬುಕ್ ರೂಪದಲ್ಲಿ ಲೋಕಾರ್ಪಣೆಗೊಳಿಸಿದರು.
ಅಕಾಡೆಮಿಯಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಮೇರಿ ಡಿ ಸಿಲ್ವರನ್ನು ಗೌರವಿಸಲಾಯಿತು.
ಅಕಾಡೆಮಿ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ತೆಲಿನೊ, ಅಕಾಡೆಮಿ ಸದಸ್ಯ ನವೀನ್ ಲೋಬೊ, ಸಮರ್ಥ್ ಭಟ್, ರೊನಾಲ್ಡ್ ಕ್ರಾಸ್ತಾ, ಅಕ್ಷತಾ ನಾಯಕ್ ಉಪಸ್ಥಿತರಿದ್ದರು.
ರಿಜಿಸ್ಟ್ರಾರ್ ರಾಜೇಶ್ ಜಿ. ವಂದಿಸಿದರು. ರೊಮನ್ಸ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.







