ಕೊಂಕಣಿ ಸಂಗೀತ ಕ್ಷೇತ್ರದ ದಿಗ್ಗಜ ಎರಿಕ್ ಒಜಾರಿಯೊ ನಿಧನ

ಮಂಗಳೂರು: ಕೊಂಕಣಿ ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜ ಎರಿಕ್ ಒಜಾರಿಯೊ (76) ಶುಕ್ರವಾರ ನಿಧನರಾಗಿದ್ದಾರೆ.
ಮೂತ್ರಪಿಂಡ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 19 ದಿನಗಳ ಚಿಕಿತ್ಸೆಯ ಬಳಿಕ ಕಾಯಿಲೆ ನಿಯಂತ್ರಣಕ್ಕೆ ಬಾರದೆ ಅವರು ಶುಕ್ರವಾರ ನಿಧನರಾಗಿದ್ದಾರೆ ಎಂದು ಅವರ ಆಪ್ತ ವಲಯದವರು ಮಾಹಿತಿ ನೀಡಿದ್ದಾರೆ.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದ ಒಜಾರಿಯೊ, ತಮ್ಮ ಸೃಜನಶೀಲ ಮತ್ತು ಸಂಘಟನಾ ಪ್ರಯತ್ನಗಳ ಮೂಲಕ ಕೊಂಕಣಿ ಭಾಷೆ ಸಂರಕ್ಷಣೆ ಮತ್ತು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಪ್ರಮುಖ ಕೊಂಕಣಿ ಸಾಂಸ್ಕೃತಿಕ ಸಂಘಟನೆಯಾದ ಮಾಂಡ್ ಸೊಭಾಷ್ ಸಂಸ್ಥೆಯ ಸಂಸ್ಥಾಪಕರಾದ ಎರಿಕ್ ಒಜಾರಿಯೊ, ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದಲ್ಲಿ ಶಾಲೆಗಳಲ್ಲಿ ಕೊಂಕಣಿಯನ್ನು ಐಚ್ಛಿಕ ಭಾಷೆಯಾಗಿ ಕಲಿಸುವಲ್ಲಿಯೂ ಒಜಾರಿಯೊ ಅವರ ಪಾತ್ರ ಮಹತ್ತರವಾದುದು. ಕೊಂಕಣಿ ಭಾಷೆಯ ಸಂರಕ್ಷಣೆಗೆ ಒತ್ತು ನೀಡುವ ಜತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ ಅವರು, 2009ರಲ್ಲಿ ಮಂಗಳೂರಿನಲ್ಲಿ ರಸ್ತೆಗಳ ಅಗಲೀಕರಣಕ್ಕಾಗಿ ಮರಗಳ ತೆರವು ವಿರೋಧಿ ನಡೆದ ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದರು.
ಒಜಾರಿಯೊ ಅವರು ತಮ್ಮ ಸಾಧನೆಗಾಗಿ ಕೊಂಕಣಿ ರತ್ನ, ಕೊಂಕಣಿ ಕಲಾ ಸಾಮ್ರಾಟ್, ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವಗಳಿಗೂ ಭಾಜನರಾಗಿದ್ದಾರೆ.







