ಕೊಂಕಣಿ ಗಾಯಕ ತಿಮೋತಿ ಸೆರಾವೊ ನಿಧನ

ಮಂಗಳೂರು: ಕೊಂಕಣಿಯ ಹಿರಿಯ ಗಾಯಕ, ಗೀತೆ ರಚನೆಕಾರ, ಸಂಯೋಜಕ, ವಿಡಂಬನಕಾರ ತಿಮೋತಿ ಸೆರಾವೊ (76) ಶನಿವಾರ ನಿಧನ ಹೊಂದಿದರು.
1948ರಲ್ಲಿ ನಗರದ ವೆಲೆನ್ಸಿಯಾದಲ್ಲಿ ಜನಿಸಿದ್ದ ತಿಮೋತಿ ಕೊಂಕಣಿ ಗಾಯನದತ್ತ ಆಕರ್ಷಿತರಾದರು. ಹಾಗೇ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಗೀತೆ ರಚನೆ ಹಾಗೂ ಸಂಯೋಜನೆಯತ್ತ ಆಸಕ್ತಿ ವಹಿಸಿದರು. ಕೊಂಕಣಿಯಲ್ಲಿ 300ಕ್ಕೂ ಅಧಿಕ ಕೊಂಕಣಿ ಹಾಡುಗಳನ್ನು ರಚಿಸಿದ್ದಾರೆ. ತಿಮೋತಿ ನೈಟ್ ಆಯೋಜಿಸುವ ಮೂಲಕ ಪ್ರೇಕ್ಷಕರಲ್ಲಿ ಸಂಗೀತ ಆಳವಾಗಿ ಬೇರೂರುವಂತೆ ಮಾಡಲು ಶ್ರಮಿಸಿದರು.
ಮುಂಬೈ ರೇಡಿಯೋ ಕೇಂದ್ರವು ತಿಮೋತಿಯ ಹಾಡುಗಳನ್ನು ನಿರಂತರವಾಗಿ ಪ್ರಸಾರ ಮಾಡಿದೆ. ಎರಡು ಕೊಂಕಣಿ ಹಾಡುಗಳ ಧ್ವನಿಸುರುಳಿಯನ್ನು ರಚಿಸಿ ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
Next Story