ಕೂಳೂರು ಹಳೆ ಸೇತುವೆ ದುರಸ್ತಿ: ವಾಹನಗಳ ಸಂಚಾರ ಅಸ್ತವ್ಯಸ್ತ

ಮಂಗಳೂರು: ರಾಷ್ಟ್ರಿಯ ಹೆದ್ದಾರಿ 66ರ ಕೂಳೂರು ಹಳೆಯ ಸೇತುವೆಯ ದುರಸ್ತಿಗಾಗಿ ವಾಹನಗಳ ಸಂಚಾರ ನಿಷೇಧಿ ಸಿದ ಕಾರಣದಿಂದಾಗಿ ಇಂದು ನಗರದಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ದಿಢೀರನೆ ಆಗಿರುವ ಬದಲಾವಣೆಯಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಇಡೀ ದಿನ ಟ್ರಾಫಿಕ್ ಜಾಮ್ ಕಂಡು ಬಂದಿದೆ. ಕುಂಟಿಕಾನ ರಿಂದ ಕೊಟ್ಟಾರ, ಬೈಕಂಪಾಡಿ ಪೇಟೆಯಲ್ಲಿ ವಾಹನಗಳು ಕಿ.ಮೀಟರ್‌ಗಟ್ಟಲೆ ಸಾಲುಗಟ್ಟಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬೆಳಗ್ಗೆ 11ರಿಂದ ಸಂಜೆ 6.30ರ ತನಕ ಹದಗಟ್ಟಿರುವ ಸೇತುವೆಯ ದುರಸ್ತಿ ಕಾರ್ಯ ನಡೆದಿದೆ. ಡಾಮರೀಕರಣ ಪುರ್ಣ ಗೊಂಡಿದ್ದು, ಗುರುವಾರ ಈ ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ. ಇನ್ನೂ ಹೊಸ ಸೇತುವೆಯಲ್ಲಿ ಅಲ್ಲಲ್ಲಿ ಉಂಟಾಗಿರುವ ಹೊಂಡಗಳ ದುರಸ್ತಿಯಾಗಬೇಕಿದೆ.
ಈ ಹಿಂದೆ ಬೈಕಂಪಾಡಿ ಕಡೆಯಿಂದ ಮಂಗಳೂರು ನಗರಕ್ಕೆ ಬರುವ ಬಸ್‌ಗಳು ಹಳೆ ಸೇತುವೆಯಲ್ಲಿ ಮತ್ತು ಮಂಗಳೂರು ನಗರದಿಂದ ಬೈಕಂಪಾಡಿ ಕಡೆಗೆ ಹೋಗುವ ವಾಹನಗಳು ಹೊಸ ಸೇತುವೆಯಲ್ಲಿ ಸಂಚರಿಸುತ್ತಿತ್ತು. ಆದರೆ ಒಮ್ಮೆಲೆ ಹಳೆಯ ಸೇತುವೆಯಲ್ಲಿ ಸಂಚಾರ ನಿಷೇಧಿಸಿ ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅನುಮತಿ ನೀಡಿರುವ ಹಿನ್ನೆಲೆ ಯಲ್ಲಿ ಗೊಂದಲ ಉಂಟಾಗಿದೆ ಎಂದು ತಿಳಿದು ಬಂದಿದೆ.
ದಿನವೂ ಚತುಷ್ಪಥ ಸಂಚಾರ ಇದ್ದದ್ದೂ ಒಮ್ಮೆಲೆ ದ್ವಿಪಥ ಪ್ರಯೋಗದಿಂದಾಗಿ ಸಂಚಾರ ವ್ಯವಸ್ಥೆ ಸಂಪೂರ್ಣ ನಿಯಂತ್ರಣ ತಪ್ಪಿತ್ತು. ಎನ್‌ಪಿಎಂಟಿ, ಬಿಎಸ್‌ಪಿ, ಎಂಆರ್‌ಪಿಎಲ್ ಟ್ಯಾಂಕರ್‌ಗಳ ಓಡಾಟದಿಂದಾಗಿ ಸಂಚಾರ ವ್ಯವಸ್ಥೆಯಲ್ಲಿ ಜನ ಸಾಮಾನ್ಯರು ಇನ್ನಷ್ಟು ತೊಂದರೆ ಅನುಭವಿಸುವಂತಾಯಿತು.
ಕೂಳೂರಿನ ಹಳೆಯ ಕಮಾನಿನ ಸೇತುವೆಯಲ್ಲಿ ಆ.19ರಿಂದ 21ರ ವರೆಗೆ ಘನ ವಾಹನಗಳ ಸಂಚಾರವನ್ನು ನಿಷೇಧಿಸಿ ಪ್ರಾಯೋಗಿಕವಾಗಿ ಪೂವಾಹ್ನ 11ರಿಂದ ಅಪರಾಹ್ನ 3 ಗಂಟೆ ಮತ್ತು ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಹೊಸ ಸೇತುವೆ ಯಲ್ಲಿ ಸಂಚರಿಸಲು ದ.ಕ. ಜಿಲ್ಲಾಧಿಕಾರಿ ಆ.14ರಂದು ಆದೇಶ ನೀಡಿದ್ದರು. ಕೂಳೂರು ಹಳೆ ಸೇತುವೆಯನ್ನು ದುರಸ್ತಿ ಗೊಳಿಸುವ ಉದ್ದೇಶಕ್ಕಾಗಿ ಮೂರು ದಿನಗಳ ಪ್ರಯಾಣಿಕರ ಬಸ್‌ಗಳನ್ನು ಹೊರತುಪಡಿಸಿ ಘನವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಹಳೆಯ ಸೇತುವೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಜಿಲ್ಲಾಧಿಕಾರಿ ಆದೇಶ ಪಾಲನೆಯಾಗಲಿಲ್ಲ ಎಂದು ತಿಳಿದು ಬಂದಿದೆ.







