ಭೂಮಿ, ಉದ್ಯೋಗ, ನಿಗಮಕ್ಕಾಗಿ ಕೊರಗ, ಜೇನುಕುರುಬರ ಒತ್ತಾಯ : ಬೆಳಗಾವಿ ಸುವರ್ಣ ವಿಧಾನ ಸೌಧದ ಎದುರು ಪ್ರತಿಭಟನೆ

ಮಂಗಳೂರು, ಡಿ.12: ರಾಜ್ಯದ ವಿಶೇಷ ನೈಜ ದುರ್ಬಲ ಬುಡಕಟ್ಟು (ಪಿವಿಟಿಜಿ)ಗಳಾದ ಕೊರಗ ಮತ್ತು ಜೇನುಕುರುಬ ಸಮುದಾಯದ ನಾಯಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ವಿಧಾನ ಸೌಧದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ದೇಶದಲ್ಲಿ ಅಳಿವಿನಂಚಿನಲ್ಲಿರುವ ಪಿವಿಟಿಜಿಗಳಲ್ಲಿ ಕರ್ನಾಟಕದ ಕೊರಗ ಹಾಗೂ ಜೇನುಕುರುಬ ಸಮುದಾಯಗಳು ಸೇರಿದ್ದು, ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಜಂಟಿ ಪ್ರತಿಭಟನೆಯ ಮೂಲಕ ರಾಜ್ಯ ಸರಕಾರದ ಗಮನ ಸೆಳೆಯಲು ಸಮುದಾಯದ ಮುಖಂಡರು ಧರಣಿ ನಡೆಸಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ದ.ಕ. ಮತ್ತು ಉಡುಪಿ ಜಿಲ್ಲೆಗಳ ಮೂಲ ನಿವಾಸಿಗಳೆಂದು ಗುರುತಿಸಲ್ಪಡುವ ಕೊರಗರು ಭೂಮಿ ಹಕ್ಕಿಗಾಗಿ ಹಲವು ದಶಕಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಡಾ.ಮುಹಮ್ಮದ್ ಪೀರ್ ನೇತೃತ್ವದಲ್ಲಿ ಕೊರಗರ ಸಮಗ್ರ ಅಧ್ಯಯನ ವರದಿಯನ್ನು ಸಲ್ಲಿಸಲಾಗಿದೆ. ಈ ವರದಿಯಲ್ಲಿ ಉಲ್ಲೇಖಿಸಿರುವಂತೆ ಪ್ರತಿ ಕೊರಗ ಕುಟುಂಬಗಳಿಗೆ ತಲಾ ಎರಡೂವರೆ ಎಕರೆ ಭೂಮಿ ವಿತರಣೆ ಹಾಗೂ ಪುನರ್ವಸತಿ ಕಾರ್ಯವನ್ನು ನೀಡಲು ಆದೇಶ ಹೊರಡಿಸಬೇಕು ಎಂದು ಕೊರಗ ಸಮುದಾಯ ಪ್ರಮುಖ ಬೇಡಿಕೆಯಾಗಿದೆ.
ಇತರ ಪ್ರಮುಖ ಬೇಡಿಕೆಗಳು :
► ಪಿವಿಟಿಜಿ ಬುಡಕಟ್ಟು ಸಮುದಾಯಗಳಿಗೆ ಭೂಮಿ ಒದಗಿಸಲು ವಿಶೇಷ ಭೂ ಒಡೆತನ ಹಕ್ಕು ಕಾಯಿದೆ ರೂಪಿಸಬೇಕು.
► ಕೊರಗ ಮತ್ತು ಜೇನು ಕುರುಬರಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮತ್ತು ಪೂರಕ ಯೋಜನೆ ಅನುಷ್ಠಾನಗೊಳಿಸಬೇಕು.
► ಕೊರಗ ಸಮುದಾಯದವರಿಗೆ ಇಲಾಖಾವಾರು ಸಮಿತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಒದಗಿಸಬೇಕು. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಮೀಸಲು ಕ್ಷೇತ್ರ ಕಲ್ಪಿಸುವುದು ಹಾಗೂ ನಾಮ ನಿರ್ದೇಶನಕ್ಕೆ ಅವಕಾಶ ಒದಗಿಸಬೇಕು.
► ಕೊರಗ ಸಮುದಾಯದ ಯುವ ಜನತೆಗೆ ವಿಶೇಷ ನೇರ ನೇಮಕಾತಿ ಅಡಿಯಲ್ಲಿ ಶೇ. 100ರಷ್ಟು ಉದ್ಯೋಗ ಒದಗಿಸಬೇಕು.
► ಪಿವಿಟಿಜಿ ಬುಡಕಟ್ಟು ಸಮುದಾಯಗಳ ನೇರ ನೇಮಕಾತಿಗೆ ವಿಶೇಷ ಉದ್ಯೋಗ ಹಕ್ಕು ನಿಯಮ ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
‘ರಾಜ್ಯದ ಎರಡು ಪಿವಿಟಿಜಿ ಸಮುದಾಯಗಳಾದ ಕೊರಗ ಮತ್ತು ಜೇನುಕುರುಬರ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ನಾವು ಬೆಳಗಾವಿ ಸುವರ್ಣ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದ್ದು, ನಮ್ಮ ಬೇಡಿಕೆಯ ಮನವಿ ಪತ್ರವನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದೇವೆ. ಕರ್ನಾಟಕ ಕರಾವಳಿಯ ಮೂಲ ನಿವಾಸಿಗಳಾದ ಕೊರಗರು ಹಲವು ದಶಕಗಳಿಂದ ಭೂಮಿ ಹಕ್ಕಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ಇದರ ಜತೆಗೆ ಉದ್ಯೋಗದ ಹಕ್ಕು ಹಾಗೂ ಜೇನುಕುರುಬರನ್ನು ಒಳಗೊಂಡು ಕೊರಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ.’
ಸುಂದರ ಕೊರಗ, ಅಧ್ಯಕ್ಷರು, ದ.ಕ. ಜಿಲ್ಲಾ ಕೊರಗ ಸಂಘ.







