ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಭತ್ತದ ಕೃಷಿಕರಿಗೆ ಸಹಾಯಧನ

ಉಳ್ಳಾಲ, ಸೆ.15: ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಭತ್ತದ ಕೃಷಿ ಮಾಡುವ ರೈತರಿಗೆ ಎಕೆರೆಗೆ ಐದು ಸಾವಿರ ರೂ.ನಂತೆ ಎರಡು ಎಕರೆ ವರೆಗೆ ಸಹಾಯಧನ ನೀಡುವ ಯೋಜನೆಗೆ 2022 ರಲ್ಲಿ ಚಾಲನೆ ನೀಡಲಾಗಿದ್ದು, ಈ ಸಲವೂ ಇದನ್ನು ಮುಂದುವರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರ್ ತಿಳಿಸಿದ್ದಾರೆ.
ಸಂಘದ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭತ್ತದ ಕೃಷಿಕರಿಗೆ ಪ್ರೋತ್ಸಾಹಧನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ವಿಧಾನಸಭಾ ನೂತನ ಅಧ್ಯಕ್ಷ, ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರನ್ನು ಗೌರವಿಸುವ ಕಾರ್ಯಕ್ರಮವು ಸೆ.17ರಂದು ಬೆಳಗ್ಗೆ 9:30ಕ್ಕೆ ಬೀರಿಯಲ್ಲಿರುವ ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.
2022-23ನೇ ಸಾಲಿನಲ್ಲಿ ಭತ್ತದ ಕೃಷಿಕರಿಗೆ 45,2000 ರೂ, ಸಹಾಯಧನ ವಿತರಿಸಲಾಗಿದೆ. ಅಲ್ಲದೇ ಎಸೆಸೆಲ್ಸಿಯ ಒಟ್ಟು 28 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ ಎಂದರು.
ಈ ಬಾರಿ ಸಂಘವು 780 ಕೋಟಿ ರೂ.ಗಳ ವ್ಯವಹಾರ ನಡೆಸಿ 1.59 ಕೋಟಿ ನಿವ್ವಳ ಲಾಭ ಗಳಿಸಿದೆ. 8,729 ಸದಸ್ಯರನ್ನು ಹೊಂದಿದ್ದು, 237 ಕೋಟಿ ರೂ.ಗಳ ಪಾಲು ಬಂಡವಾಳ ಹೊಂದಿದೆ ಎಂದು ಹೇಳಿದರು.
ಈ ಬಾರಿ 322 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, 305 ಕೋಟಿ ರೂ. ಠೇವಣಿ ಪಾವತಿಸಿದ್ದು, ವರ್ಷಾಂತ್ಯದಲ್ಲಿ 153 ಕೋಟಿ ರೂ. ಠೇವಣಿ ಹೊಂದಿದೆ ಎಂದು ಅವರು ತಿಳಿಸಿದರು.
ಈ ಸಾಲಿನಲ್ಲಿ 163 ಕೋಟಿ ರೂ. ಸಾಲ ವಿತರಿಸಿದ್ದು, 161 ಕೋಟಿ ರೂ. ವಸೂಲಿ ಆಗಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಬೂಸಾಲಿ ಕೆ.ಬಿ., ನಿರ್ದೇಶಕರಾದ ಗಂಗಾಧರ, ಕೃಷ್ಣಪ್ಪ ಸಾಲ್ಯಾನ್, ಉದಯಕುಮಾರ್ ಶೆಟ್ಟಿ, ಪದ್ಮಾವತಿ, ನಾರಾಯಣ ತಲಪಾಡಿ, ಬಾಬು ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.







