ಕೃಷ್ಣಾಪುರ: ಯುನಿವೆಫ್ ವತಿಯಿಂದ ಸೀರತ್ ಸಮಾವೇಶ

ಕೃಷ್ಣಾಪುರ: ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ಕೇಂದ್ರೀಯ ವಿಷಯದಲ್ಲಿ ಯುನಿವೆಫ್ ಕರ್ನಾಟಕ ಇದರ ವತಿಯಿಂದ ಅಕ್ಟೋಬರ್ 6 ರಿಂದ ಡಿ.22ರವರೆಗೆ ದ.ಕ.ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಅರಿಯಿರಿ ಮನುಕುಲದ ಪ್ರವಾದಿಯನ್ನು ಎಂಬ ಪ್ರವಾದಿ ಸಂದೇಶ ಅಭಿಯಾನದ ಪ್ರಯುಕ್ತ ಕೃಷ್ಣಾಪುರದ ಪ್ಯಾರಡೈಸ್ ಗ್ರೌಂಡ್ ನಲ್ಲಿ ಸೀರತ್ ಸಮಾವೇಶ ಜರಗಿತು.
ಈ ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು ಪ್ರವಾದಿ ಮುಹಮ್ಮದ್ (ಸ) ರ ಮಾದರಿ ಜೀವನ ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಿ “ಪ್ರವಾದಿ ಮುಹಮ್ಮದ್ (ಸ) ರ ಜೀವನ ಮತ್ತು ಆದರ್ಶಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಕೇವಲ ಕೆಲವು ಆರಾಧನಾ ಕರ್ಮಗಳಲ್ಲಿ ನಾವು ಪ್ರವಾದಿಯವರನ್ನು ಅನುಸರಿಸಿ ಕೃತಾರ್ಥರಾದೆವೆಂದು ಭಾವಿಸಿದ್ದೇವೆ. ನಮ್ಮ ಮದುವೆ, ವ್ಯವಹಾರ, ರಾಜಕೀಯದಲ್ಲಿ ಪ್ರವಾದಿ ಆದರ್ಶ ಕಾಣುವುದೇ ಇಲ್ಲ. 1400 ವರ್ಷಗಳ ಹಿಂದೆಯೇ ಪ್ರವಾದಿ (ಸ) ನಮ್ಮ ಪ್ರಾಪಂಚಿಕ ಮೋಹದ ಬಗ್ಗೆ ಎಚ್ಚರಿಸಿದ್ದರು. ಅಂದು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಪ್ರಾಪಂಚಿಕ ಮೋಹ ಮತ್ತು ಸಾವಿನಿಂದ ಹಿಮ್ಮೆಟ್ಟುವ ಕಾರಣದಿಂದ ಇತರ ಸಮುದಾಯಗಳು ನಿಮ್ಮ ಮೇಲೆ ಮುಗಿಬೀಳುತ್ತವೆ ಎಂಬ ಭವಿಷ್ಯವಾಣಿ ಇಂದು ನಿಜವಾಗುವುದನ್ನು ನಾವು ಕಾಣುತ್ತಿದ್ದೇವೆ. ಇನ್ನಾದರೂ ಪ್ರವಾದಿ ಚರ್ಯೆಯತ್ತ ಮುಖಮಾಡದಿದ್ದರೆ ನಮ್ಮ ಭವಿಷ್ಯ ಕರಾಳವಾಗಲಿದೆ” ಎಂದು ಹೇಳಿದರು.
ಉದ್ಯಮಿ ಬಿ. ಎಸ್. ಹನೀಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಭಿಯಾನದ ಸಂಚಾಲಕ ಸೈಫುದ್ದೀನ್ ಕುದ್ರೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೌಫಲ್ ಹಸನ್ ಕಿರಾಅತ್ ಪಠಿಸಿದರು. ಉಬೈದುಲ್ಲಾ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕೃಷ್ಣಾಪುರ ಶಾಖಾಧ್ಯಕ್ಷ ಅಬ್ದುಲ್ ಖಾದರ್ ಬಾಂಬೆ ಮತ್ತು ಯುನಿವೆಫ್ ಉತ್ತರ ವಲಯ ಸಂಚಾಲಕ ಅಬ್ದುರ್‍ರಶೀದ್ ಕುದ್ರೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಭಿಯಾನದ ಪುರವಣಿ ಬಿಡುಗಡೆ ಕಾರ್ಯಕ್ರಮ ಕೂಡಾ ಜರಗಿತು.





