ಜೂ.21-22ರಂದು ‘ಕುಡ್ಲ ಪೆಲಕಾಯಿ ಪರ್ಬ’

ಮಂಗಳೂರು, ಜೂ.18: ಹನಿಜೆನಿಕ್ಸ್ ಬೀ ಫಾರ್ಮ್ಸ್ ಮತ್ತು ರೋಟರಿ ಇಂಟರ್ ನ್ಯಾಷನಲ್ ಮಂಗಳೂರು ವತಿಯಿಂದ ಜೂ.21 ಮತ್ತು 22ರಂದು ನಗರದ ಬೆಂದೂರ್‌ವೆಲ್‌ನ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ‘ಕುಡ್ಲ ಪೆಲಕಾಯಿ ಪರ್ಬ’ವನ್ನು ಆಯೋಜಿಸಲಾಗಿದೆ.
ಜು.21ರ ಪೂರ್ವಾಹ್ನ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ನೆರವೇರಲಿದೆ. ರಾತ್ರಿ 8 ಗಂಟೆಯವರೆಗೆ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿದ್ದು ರಾಜ್ಯದ ವಿವಿಧ ಜಿಲ್ಲೆಗಳು ಕೃಷಿಕರು ಭಾಗವಹಿಸಲಿದ್ದಾರೆ. ಸ್ಥಳೀಯ ಕೃಷಿ, ಆಹಾರ ಪರಂಪರೆ ಮತ್ತು ಉದ್ಯಮಶೀಲನತೆಯನ್ನು ಉತ್ತೇಜಿಸಲು ಈ ಪೆಲಕಾಯಿ ಪರ್ಬದ ಆಯೋಜನೆಯಾಗಿದೆ ಎಂದು ಸಂಯೋಜಕ ಅಶ್ವಿನ್ ಸಿಕ್ವೇರಾ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಮನಗರದಿಂದ ನಾಲ್ಕು ಮಂದಿ ರೈತರು ಮಾವು, ಚಿಕ್ಕಬಳ್ಳಾಪುರ ಮತ್ತು ಸ್ಥಳೀಯ ರೈತರು ಹಲಸು, ಮಡಿಕೇರಿಯಿಂದ ಬೆಣ್ಣೆ ಹಣ್ಣು ಹಾಗೂ ಕಿತ್ತಳೆ, ಬೆಂಗಳೂರಿನಿಂದ ವಿವಿಧ ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನಗಳು ಸೇರಿದಂತೆ ಸ್ಥಳೀಯವಾಗಿ, ಹಲಸಿನ ಹಣ್ಣಿನಿಂದ ತಯಾರಿಸಿದ ವಿವಿಧ ಖಾದ್ಯಗಳು ಪರ್ಬದಲ್ಲಿರಲಿವೆ. ಹಲಸಿನ ಪ್ರಿಯರಿಗೆ ಇದೊಂದು ಹಬ್ಬವಾಗಲಿದೆ. ಈ ಹಲಸು ಹಬ್ಬದಲ್ಲಿ ಸಣ್ಣ ಕೈಗೋರಿಕೋದ್ಯಮಿಗಳಿಗೆ ತಾವು ಮಾಡಿದ ಉತ್ಪನ್ನಗಳನ್ನು ಮಾರಾಟ ಮಾಡುವುದರೊಂದಿಗೆ ತಮ್ಮ ಸೇವೆ ಪ್ರದರ್ಶಿಸಲು ಅವಕಾಶ ಸಿಗಲಿದೆ. ಸ್ಥಳೀಯ ವ್ಯವಹಾರಗಳು ಮತ್ತು ಕುಶಲಕರ್ಮಿಗಳನ್ನು ಬೆಂಬಲಿಸುವುದು ಕೂಡ ಮೇಳದ ಉದ್ದೇಶವಾಗಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಆಯೋಜನಾ ಸಮಿತಿಯ ಸಹಾಯಕ ಸಂಯೋಜಕರಾದ ಶ್ರೀಕಾಂತ್ ಪೈ, ಜಾಕ್ಸನ್ ಸಲ್ಡಾನ, ಸದಸ್ಯ ವೀವನ್ ಪಿಂಟೋ ಉಪಸ್ಥಿತರಿದ್ದರು.







