ಕುಳಾಯಿ: ಮನೆಗೆ ನುಗ್ಗಿ ಕಳ್ಳತನ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಮಂಗಳೂರು, ಜ.28: ಕುಳಾಯಿಯ ಮನೆಯೊಂದರಿಂದ ದೈವಗಳ ಮೂರ್ತಿಗಳು ಮತ್ತು ಟಿವಿ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಚೊಕ್ಕಬೆಟ್ಟು ನಿವಾಸಿ ವಾಜೀದ್ ಜೆ ಯಾನೆ ವಾಜಿ (27) ಮತ್ತು ಜೋಕಟ್ಟೆಯ ಸಯ್ಯದ್ ಆಲಿ (40) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಳಾಯಿ ಗ್ರಾಮದ ಯಶೋಧ ಕ್ಲಿನಿಕ್ ಬಳಿಯ ಮನೆಯಲ್ಲಿದ್ದ ದೈವಗಳ ಮೂರ್ತಿಗಳು ಹಾಗೂ ಅದಕ್ಕೆ ಸಂಬಂಧ ಪಟ್ಟ ಪೂಜಾ ಪರಿಕರಗಳು ಮತ್ತು ಟಿವಿ ಮತ್ತಿತರ ಸೊತ್ತುಗಳನ್ನು ಕಳ್ಳರು 2025 ಡಿಸೆಂಬರ್26 ರಂದು ರಾತ್ರಿ ಸಮಯ ಮನೆಯ ಮೇಲ್ಚಾವಣಿಯ ಹಂಚು ತೆಗೆದು ಮನೆಯೊಳಗೆ ಪ್ರವೇಶಿಸಿ ಕಳವು ಮಾಡಿದ್ದರು. ಈ ಸಂಬಂಧ ಅಮಿತಾ, ಎಂಬರು ಪೊಲೀಸರಿಗೆ ದೂರು ನೀಡಿದ್ದರು.
ಸುಮಾರು 1 ಲಕ್ಷ ರೂ. ಮೌಲ್ಯದ ಪಸಪ್ಪ ದೈವದ ತಾಮ್ರದ ಮೂರ್ತಿ-1, ಮಂತ್ರದೇವತೆಯ ಬೆಳ್ಳಿಯ ಮೂರ್ತಿ-1, ಕಲ್ಲುರ್ಟಿ ಪಂಜುರ್ಲಿ ದೈವದ ತಾಮ್ರದ ಮೂರ್ತಿ-1, ಬೆಳ್ಳಿಯ ಕಡ್ಸಲೆ (ಖಡ್ಗ)-1, ತಾಮ್ರದ ಘಂಟೆ-2, ತಾಮ್ರದ ಚೆಂಬು-4, ಹಾಗೂ ಎಲ್‌ಇಡಿ ಟಿ.ವಿ-1 ಕಳವಾಗಿರುವ ಬಗ್ಗೆ ಡಿ.27ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ಸಹಾಯದಿಂದ ವಾಜೀದ್ ಜೆ ಎಂಬಾತನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ತಾನು ಕಳವುಗೈದ ಹಿತ್ತಾಳೆ ಹಾಗೂ ತಾಮ್ರದ ಸಾಮಗ್ರಿಗಳನ್ನು ಜೋಕಟ್ಟೆಯ ಸಯ್ಯದ್ ಆಲಿ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜ.27ರಂದು ಸಯ್ಯದ್ ಆಲಿ ಎಂಬಾತನನ್ನು ವಶಕ್ಕೆ ಪಡೆದು ಆತನ ಮನೆಯಿಂದ ಸುಮಾರು 1,95,000 ರೂ ಮೌಲ್ಯದ ಬೆಳ್ಳಿಯ ಮಂತ್ರದೇವತೆಯ ಮೂರ್ತಿ, ಕೊಡೆ, ಕಡ್ಸಲೆ, ಸುಮಾರು ರೂ 2,750 ಮೌಲ್ಯದ ಹಿತ್ತಾಳೆ ಪೂಜಾ ಸಾಮಾಗ್ರಿ, ಸುಮಾರು ರೂ. 300 ಮೌಲ್ಯದ ತಾಮ್ರದ ಪೂಜಾ ಸಾಮಾಗ್ರಿ, ಟಿ.ವಿ ಮತ್ತು ಸೆಟ್‌ಆಪ್ ಬಾಕ್ಸ್, ಆರೋಪಿಗಳ 2 ಮೊಬೈಲ್ ಹಾಗೂ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಸುಮಾರು ರೂ. 30,000 ಮೌಲ್ಯದ ಸ್ಕೂಟರ್-1 ಪೊಲೀಸರು ವಶಪಡಿಸಿಕೊಂಡಿದ್ದರು.
ಕಳವು ಆರೋಪಿ ವಾಜೀದ್ ಮೇಲೆ ಸುರತ್ಕಲ್ ಠಾಣೆಯಲ್ಲಿ ‘ಬಿ’ ರೌಡಿ ಶೀಟ್ ಹಾಗೂ ಎಂಒಬಿ ತೆರೆಯಲಾಗಿದ್ದು ಈತನ ಮೇಲೆ ಮಂಗಳೂರು ನಗರ, ಉಡುಪಿ, ಉತ್ತರ ಕನ್ನಡ, ಹಾಸನ ಜಿಲ್ಲೆಗಳಾದ್ಯಂತ 1 ಕೊಲೆಯತ್ನ, 2 ದರೋಡೆ, 3 ದನ ಕಳ್ಳತನ, 6 ಮನೆಕಳ್ಳತನ, 3 ವಾಹನ ಕಳ್ಳತನ, 1 ಇತರ ಪ್ರಕರಣಗಳು ದಾಖಲಾಗಿದ್ದು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಹೀಗಾಗಿ ನ್ಯಾಯಾಲಯವು ಆರೋಪಿ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.
ಆರೋಪಿಗಳನ್ನು ಜ.28 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ,ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.







