ಕುತ್ತಾರ್| ಕೊರಗಜ್ಜನ ಕ್ಷೇತ್ರದಲ್ಲಿ ದ್ವೇಷ, ಕೋಮುವಾದದ ಭಾಷಣಗಳಿಗೆ ಇನ್ನು ಮುಂದೆ ಅವಕಾಶವಿಲ್ಲ
► ದೈವದ ತೀರ್ಪು !

ಉಳ್ಳಾಲ: ಕುತ್ತಾರ್ ನಲ್ಲಿರುವ ಕೊರಗಜ್ಜನ ಆದಿಕ್ಷೇತ್ರದಲ್ಲಿ ದ್ವೇಷ, ಕೋಮುವಾದದ ಭಾಷಣಗಳಿಗೆ ಇನ್ನು ಮುಂದೆ ಅವಕಾಶವಿರುವುದಿಲ್ಲ ಎಂದು ದೈವದ ತೀರ್ಪು ಬಂದಿದೆ.
ಕರಾವಳಿಯ ಸಾಂಪ್ರದಾಯಿಕ ‘ಸತ್ಯ ಧರ್ಮ’ದ ಪ್ರಕಾರ, ದೈವಾರಾಧನೆಯ ಕ್ಷೇತ್ರಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಸಮಾನತೆಯನ್ನು ಬೆಳೆಸುವ ಸ್ಥಳಗಳಾಗಿವೆ. ಇಲ್ಲಿ ದ್ವೇಷವನ್ನು ಹರಡುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ ಎಂದು ಕೊರಗಜ್ಜನ ಕೋಲದಲ್ಲಿ ದೈವ ತಿಳಿಸಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ವಿಶ್ವ ಹಿಂದೂ ಪರಿಷತ್ತ್ (ವಿಹಿಂಪ) ನಡೆಸಿದ ‘ಕೊರಗಜ್ಜನೆಡೆ ನಮ್ಮ ನಡೆ’ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಎಂಬವರು "ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾಗಬೇಕು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಸ್ಥಳೀಯರು ಮತ್ತು ಭಕ್ತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಈ ಪ್ರಸ್ತಾಪ ಕೊರಗಜ್ಜನ ಕೋಲದ (ದೈವೋತ್ಸವ) ಸಮಯದಲ್ಲಿ ಮುಂದೆ ಬಂದಿತ್ತು.
ಕೊರಗಜ್ಜ ದೈವವು ತುಳು ಭಾಷೆಯಲ್ಲಿ ತನ್ನ ತೀರ್ಪನ್ನು ನೀಡುತ್ತಾ, “ನನ್ನ ಕ್ಷೇತ್ರವನ್ನು ದ್ವೇಷದ ಮಾತುಗಳಿಂದ ಅಪವಿತ್ರಗೊಳಿಸಬೇಡಿ. ಇನ್ನುಮುಂದೆ ಇಲ್ಲಿಗೆ ಬರುವ ಭಕ್ತರಿಗೆ ಸ್ವಾಗತ, ಆದರೆ ದ್ವೇಷ ಭಾಷಣಕಾರರಿಗೆ ಅವಕಾಶ ಇಲ್ಲ. ಇಲ್ಲಿಗೆ ಬಂದ ಭಕ್ತರು ದೇವರಿಗೆ ಕೈಮುಗಿದು ಹೋಗಬೇಕು ಎಂದು ಘೋಷಿಸಿತು ಎಂದು ತಿಳಿದುಬಂದಿದೆ.