ಭಾರೀ ಮಳೆ: ಅಡ್ಡೂರು ಗ್ರಾಮದ ನೂಯಿಯಲ್ಲಿ ಭಾರೀ ಅನಾಹುತ

ಮಂಗಳೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರು ಗ್ರಾಮದ ನೂಯಿ ಎಂಬಲ್ಲಿ ಭಾರೀ ಅನಾಹುತ ಸಂಭವಿಸಿದೆ.
ಹೆದ್ದಾರಿಗಾಗಿ ಗುರುಪುರದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನೂತನ ಸೇತುವೆಯಿಂದ ಮುಂದಕ್ಕೆ ಗದ್ದೆಗಳಿಗೆ ಸುಮಾರು 20 ಅಡಿ ಎತ್ತರಕ್ಕೆ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿದೆ. ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಮಣ್ಣೆಲ್ಲ ಗದ್ದೆ ಪ್ರದೇಶದತ್ತ ಜರಿಯಲಾರಂಭಿಸಿದೆ. ಕೆಲವೆಡೆ ಮನೆಗಿಂತಲೂ ಎತ್ತರಕ್ಕೆ ಹೆದ್ದಾರಿ ನಿರ್ಮಾಣಗೊಳ್ಳುತ್ತಿದೆ. ಜರಿದ ಕೆಸರು ಮಣ್ಣು ಮನೆಗಳ ಅಂಗಳದಲ್ಲಿ ತುಂಬಿದೆ. ಪರಿಣಾಮ ಮನೆಯವರಿಗೆ ಕೃತಕ ದಿಗ್ಭಂದನ ಉಂಟಾಗಿದೆ.
ಹೆದ್ದಾರಿಯ ಎರಡೂ ಪಾರ್ಶ್ವದಲ್ಲಿ ಕಲ್ಲು ಹಾಸಬೇಕು. ಇಲ್ಲದಿದ್ದರೆ ಹೆದ್ದಾರಿಗೆ ತುಂಬಿಸಿರುವ ಮಣ್ಣು ಸಂಪೂರ್ಣ ಜರಿಯಲಿದೆ. ಕೆಲವೆಡೆ ಹೆದ್ದಾರಿಗೆ ಅಳವಡಿಸಿರುವ ಸಿಮೆಂಟ್ ಮೋರಿಗಳ ಕಾಮಗಾರಿ ಅರ್ಧದಲ್ಲೇ ಬಾಕಿಯಾಗಿದೆ. ಗುತ್ತಿಗೆ ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಸಂಸ್ಥೆಯ ಅಧಿಕಾರಿಗಳಲ್ಲಿ ದೂರಿಕೊಂಡರೆ ಹೆದ್ದಾರಿಗೆ ಪಿಚ್ಚಿಂಗ್ ಮಾಡಲು ಯೋಜನೆಯಲ್ಲಿ ಅವಕಾಶ ಕಲ್ಪಿಸಿಲ್ಲ ಎಂದು ಉತ್ತರ ಸಿಕ್ಕಿದೆ. ಇದಕ್ಕೆ ಹೆದ್ದಾರಿ ಪ್ರಾಧಿಕಾರವೇ ಉತ್ತರಿಸಬೇಕು ಎಂದು ಗುರುಪುರ ಗ್ರಾಪಂ ಮಾಜಿ ಅಧ್ಯಕ್ಷ ಯಶವಂತ ಶೆಟ್ಟಿ ಒತ್ತಾಯಿಸಿದ್ದಾರೆ.
ಮಳೆಯಿಂದ ಅವಾಂತರ ಸಂಭವಿಸಿದ ಹೆದ್ದಾರಿ ಪ್ರದೇಶಕ್ಕೆ ಗುರುಪುರ ಹೋಬಳಿ ಗ್ರಾಮ ಕರಣಿಕೆ ಶಿಲ್ಪಾ, ಗ್ರಾಪಂ ಅಧ್ಯಕ್ಷೆ ಸಫರಾ ಮದಕ, ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.







