ಆಧುನಿಕ ತಂತ್ರಜ್ಞಾನದ ಮೂಲಕ ಭಾಷೆಯ ಅಭಿವೃದ್ಧಿ ಸಾಧ್ಯ: ಮುಹಮ್ಮದ್ ಅಲಿ ಕಮ್ಮರಡಿ

ಮಂಗಳೂರು, ಸೆ.3: ಸುಮಾರು 1400ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಬ್ಯಾರಿ ಭಾಷೆಯಲ್ಲಿ ಶಬ್ಧಗಳ ಕೊರತೆ ಇದೆ. ಈ ಕೊರತೆಯನ್ನು ನೀಗಿಸಲು ಒಂದೋ ಹೊಸ ಬ್ಯಾರಿ ಶಬ್ಧಗಳನ್ನು ಹುಟ್ಟುಹಾಕಬೇಕು. ಆದರೆ ಪ್ರಸಕ್ತ ವಿದ್ಯಮಾನದಲ್ಲಿ ಅದು ಅಷ್ಟು ಸಮಂಜಸವಾದುದಲ್ಲ. ಹಾಗಾಗಿ ಕನ್ನಡ ಸಹಿತ ಬ್ಯಾರಿ ಭಾಷೆಗೆ ಹತ್ತಿರವಿರುವ ಸ್ಥಳೀಯ ಇತರ ಭಾಷೆಗಳಿಂದ ಶಬ್ಧಗಳನ್ನು ಎರವಲು ಪಡೆಯುವುದು ಅನಿವಾರ್ಯ ಎಂದು ಬ್ಯಾರಿ ಇನ್ಫೋ.ಕಾಂ ಇದರ ಸ್ಥಾಪಕ ಮುಹಮ್ಮದ್ ಅಲಿ ಕಮ್ಮರಡಿ ಹೇಳಿದರು.
ಮಂಗಳೂರು ವಿವಿಯ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ನಗರದ ವಿವಿ ಕಾಲೇಜಿನ ಡಾ. ಶಿವರಾಮ ಕಾರಂತ ಭವನದಲ್ಲಿ ಬುಧವಾರ ನಡೆದ ಱಬ್ಯಾರಿ ವೆಬ್ ಪಲಕತ್ತೊ ಲೇಸ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅರಬಿ ಭಾಷೆಯಲ್ಲಿ 10 ಲಕ್ಷ, ಇಂಗ್ಲಿಷ್‌ನಲ್ಲಿ 6 ಲಕ್ಷ, ಕನ್ನಡದಲ್ಲಿ 1.60 ಲಕ್ಷ ಶಬ್ಧಗಳಿವೆ. ಆದರೆ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಕಟಿಸಿದ ಡಿಕ್ಷಿನರಿಯಲ್ಲಿ ಸುಮಾರು 20 ಸಾವಿರ ಶಬ್ದಗಳಷ್ಟೇ ಇದೆ. ಬ್ಯಾರಿ ಭಾಷೆಯ ಅಭಿವೃದ್ಧಿಯ ದೃಷ್ಟಿಯಿಂದ ಇತರ ಭಾಷೆಗಳ ಸಣ್ಣ ಸಣ್ಣ ಲೇಖನ, ಕತೆ, ಕವನ, ಚುಟುಕು ಇತ್ಯಾದಿಯನ್ನು ಅನುವಾದಿಸುವ ಅಗತ್ಯ ವಿದೆ. ಜೊತೆಗೆ ಆಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ಬ್ಯಾರಿ ಭಾಷೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿದೆ ಎಂದು ಮುಹಮ್ಮದ್ ಅಲಿ ಕಮ್ಮರಡಿ ಅಭಿಪ್ರಾಯಪಟ್ಟರು.
ಯಾವುದೇ ಭಾಷೆಯು ಒಂದು ಜನಾಂಗ, ಸಮುದಾಯಕ್ಕೆ ಸೀಮಿತವಾಗಬಾರದು. ಅದು ಸಾರ್ವತ್ರಿಕವಾಗಬೇಕು. ಆವಾಗ ಭಾಷೆ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಬ್ಯಾರಿ ಭಾಷೆಯ ಅಭಿವೃದ್ಧಿಗೆ ಸಾಮಾಜಿಕ ಜಾಲತಾಣವನ್ನು ಸಮರ್ಪಕ ವಾಗಿ ಬಳಸಬೇಕು ಎಂದು ಮುಹಮ್ಮದ್ ಅಲಿ ಕಮ್ಮರಡಿ ಹೇಳಿದರು.
ವೆಬ್ ಪಲಕದ ಎಗ್ಗೆ -1ರಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಱಬ್ಯಾರಿ ಅಸ್ಮಿತೆರೊ ಅಧ್ಯಯನ ಎನೆ ಪಿನ್ನೆ ಎವುಡೆ? ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು. ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಶುಭ ಹಾರೈಸಿದರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಸ್ವಾಗತಿಸಿದರು. ಸಲಹಾ ಸಮಿತಿಯ ಸದಸ್ಯರಾದ ಬಶೀರ್ ಬೈಕಂಪಾಡಿ, ಖಾಲಿದ್ ತಣ್ಣೀರುಬಾವಿ, ಹಂಝ ಮಲಾರ್ ಉಪಸ್ಥಿತರಿದ್ದರು.







