ದ.ಕ.ಜಿಲ್ಲೆಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ

ಮಂಗಳೂರು, ಜು.17: ದ.ಕ.ಜಿಲ್ಲೆಯನ್ನು 2025ರೊಳಗೆ ಕ್ಷಯರೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆರಂಭಿಸಿರುವ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಕ್ಕೆ ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯ ಕಚೇರಿಯಲ್ಲಿ ಡಿಎಚ್‌ಒ ಡಾ. ಕಿಶೋರ್ ಕುಮಾರ್ ಚಾಲನೆ ನೀಡಿದರು.
ಆಗಸ್ಟ್ 2ರವರೆಗೆ ನಡೆಯುವ ಈ ಆಂದೋಲನದಲ್ಲಿ ಗಂಡಾಂತರಕಾರಿ ಪ್ರದೇಶ ಹಾಗೂ ಹೆಚ್ಚು ಅಪಾಯಕಾರಿ ಪ್ರದೇಶ, ಕಲ್ಲುಕೋರೆ, ಗಣಿಕಾರಿಕೆ, ಕಾರ್ಖಾನೆ, ಕೊಳಚೆ ಪ್ರದೇಶ, ವಲಸಿಗರು, ಅಸಂಘಟಿತ ರ್ಕಾುಕರು, ಆರೋಗ್ಯ ಸೇವೆ ವಂಚಿತರು, ಸಾರಿಗೆ ವ್ಯವಸ್ಥೆ ಇಲ್ಲದೆ ತಲುಪಲಾಗದ ಹಳ್ಳಿಗಳು, ಅತೀ ಹೆಚ್ಚು ಕ್ಷಯ ಪ್ರಕರಣಗಳು ಇರುವ ಪ್ರದೇಶ, ನಿರಾಶ್ರಿತರು, ವೃದ್ಧಾಶ್ರಮಗಳು, ಬೀಡಿಕಾರ್ಮಿಕರು, ನೇಕಾರರು, ಬುಡಕಟ್ಟು ಜನಾಂಗದವರನ್ನು ಗಮನದಲ್ಲಿಟ್ಟುಕೊಂಡು ತರಬೇತಿ ಪಡೆದ 740 ತಂಡಗಳಿಂದ (1 ತಂಡದಲ್ಲಿ ತಲಾ ಇಬ್ಬರು) 3,64,310 ಮಂದಿಯನ್ನು ತಲುಪುವ ಗುರಿ ಹೊಂದಲಾಗಿದೆ.
ಎರಡು ವಾರಕ್ಕಿಂತ ಹೆಚ್ಚು ಕಫ ಸಹಿತ ಕೆಮ್ಮು, ಸಂಜೆ ವೇಳೆ ಜ್ವರ, ಹಸಿವಾಗದಿರುವುದು, ತೂಕ ಕಡಿಮೆ ಆಗುವುದು, ರಾತ್ರಿ ವೇಳೆ ಬೆವರುವುದು, ಎದೆಯಲ್ಲಿ ನೋವು, ಕಫದಲ್ಲಿ ರಕ್ತ ರೋಗಲಕ್ಷಣಗಳಿರುವ ವ್ಯಕ್ತಿಗಳು ತಂಡದ ಸದಸ್ಯರು ಮನೆ ಭೇಟಿ ನೀಡಿದಾಗ ಸೂಕ್ತ ಮಾಹಿತಿಯೊಂದಿಗೆ ಕಫ ಮಾದರಿಯನ್ನು ನೀಡಬೇಕು. ರೋಗವಿದೆ ಖಚಿತಗೊಂಡ ಬಳಿಕ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
ಕ್ಷಯರೋಗವು ಸಾಂಕ್ರಾಮಿಕ ರೋಗವಾಗಿದ್ದು, ಮೈಕೋಬ್ಯಾಕ್ಟೀರಿಯಾ ಟ್ಯುಬರ್‌ಕುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತಿದೆ. ಕ್ಷಯರೋಗಿ ಕೆಮ್ಮಿದಾಗ, ಸೀನಿದಾಗ ತುಂತುರು ಹನಿಗಳ ಮೂಲಕ ಮತ್ತೊಬ್ಬರಿಗೆ ಹರಡುತ್ತದೆ. ಚಿಕಿತ್ಸೆ ಪಡೆಯದ ಶ್ವಾಸಕೋಶ ಕ್ಷಯರೋಗಿ 1 ವರ್ಷದಲ್ಲಿ ಕನಿಷ್ಠ 10-15 ಮಂದಿಗೆ ಕ್ಷಯರೋಗವನ್ನು ಹರಡುವ ಸಾಧ್ಯತೆ ಇದೆ. ಕ್ಷಯರೋಗವು ಶ್ವಾಸಕೋಶವಲ್ಲದೆ ಇತರೆ ಅಂಗಾಂಗಗಳಿಗೂ ಬರುತ್ತದೆ.
ಜಿಲ್ಲೆಯಲ್ಲಿ 2018ರಲ್ಲಿ 3,256, 2019ರಲ್ಲಿ 3,439, 2020ರಲ್ಲಿ 2,472, 2021ರಲ್ಲಿ 2,438, 2022ರಲ್ಲಿ 2,964 ಮತ್ತು ಪ್ರಸಕ್ತ ವರ್ಷದ ಜನವರಿ 1ರಿಂದ ಜುಲೈ 17ರವರೆಗೆ 1,544 ಮಂದಿ ಕ್ಷಯರೋಗಿಗಳನ್ನು ಗುರುತಿಸಲಾಗಿದೆ. ಕ್ಷಯರೋಗ ಬಂದರೆ ಭಯಪಡುವ ಅಗತ್ಯವಿಲ್ಲ. ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ದೊರಕುವ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮೂಲಕ ರೋಗ ನಿಯಂತ್ರಿಸಬಹುದಾಗಿದೆ ಎಂದು ದ.ಕ. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್ ತಿಳಿಸಿದ್ದಾರೆ.







