ಸ್ವಚ್ಛತೆ ನಮ್ಮ ಸಂಸ್ಕಾರವಾಗಲಿ: ಸಂಸದ ಬ್ರಿಜೇಶ್ ಚೌಟ

ಮಂಗಳೂರು: ಸ್ವಚ್ಛತೆಯು ಕೇವಲ ತೋರಿಕೆಗೆ ಸೀಮಿತವಾಗದೆ ನಮ್ಮ ಬದುಕಿನಲ್ಲಿ ಸ್ವಭಾವ ಮತ್ತು ಸಂಸ್ಕಾರವಾದರೆ ಮಾತ್ರ ಸಮಾಜವನ್ನು ಶುಚಿಯಾಗಿಟ್ಟುಕೊಳ್ಳಬಹುದು ಎಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಹೇಳಿದ್ದಾರೆ.
ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ತೋಟ ಬೆಂಗರೆಯಲ್ಲಿ ಮಂಗಳವಾರ ನಡೆದ ಬೃಹತ್ ಸ್ವಚ್ಛತಾ ಅಭಿಯಾನ ಸ್ವಚ್ಛತೆಯೇ ಸೇವೆ -೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಚ್ಛತೆಯನ್ನು ಪಾಲಿಸಲು ಅಭಿಯಾನ ನಡೆಸಬೇಕಾಗಿರುವುದು ವಿಷಾಧಕರವಾಗಿದೆ. ಸ್ವಚ್ಛತೆ ನಮ್ಮ ದೈನಂದಿನ ಭಾಗ ವಾಗಿರಬೇಕೆ ಹೊರತು ಅಭಿಯಾನ ರೂಪದಲ್ಲಿ ನಡೆಸುವಂತದ್ದಲ್ಲ. ವೈಯಕ್ತಿಕವಾಗಿ ಸ್ವಚ್ಛತೆ ಕಾಪಾಡುವ ನಾಗರಿಕರು ಸಮಾಜಮುಖಿಯಾಗಿ ಚಿಂತಿಸದಿರುವುದು ದುರಂತವಾಗಿದೆ ಎಂದು ಸಂಸದರು ಕಳವಳ ವ್ಯಕ್ತಪಡಿಸಿದರು.
ಶಾಲೆಗಳಲ್ಲಿ ಸ್ವಚ್ಛತಾ ಪಾಠವನ್ನು ಕಲಿತು ಹೊರಗಡೆ ಅದನ್ನು ಅನುಸರಿಸುವುದೇ ಮೌಲ್ಯಯುತ ಶಿಕ್ಷಣವಾಗಿದೆ. ಈ ನಿಟ್ಟಿ ನಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆಯನ್ನು ಸಮಗ್ರವಾಗಿ ಅರಿತು ಮುಂದಿನ ದಿನಗಳಲ್ಲಿ ಅನುಸರಿಸುವುದೇ ನಮಗಿರುವ ಆಶಾಕಿರಣವಾಗಿದೆ. ವಿದ್ಯಾರ್ಥಿ ಮತ್ತು ಯುವ ಸಮೂಹ ಮನಸ್ಸು ಮಾಡಿದರೆ ಈ ದೇಶವು ಸ್ವಚ್ಛ ರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದರು.
ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ನಡೆಯುವ ಈ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಸಂಸದರು ಹೇಳಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ ಎಲ್ ಆನಂದ್, ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ರೋಷನ್ ನಾಣಯ್ಯ, ಹಿರಿಯ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್, ಸುರತ್ಕಲ್ ವಲಯ ಆಯುಕ್ತೆ ವಾಣಿ, ಬೆಂಗರೆ ಮಹಾಜನ ಸಭಾ ಅಧ್ಯಕ್ಷ ಚೇತನ್ ಬೆಂಗ್ರೆ ಉಪಸ್ಥಿತರಿದ್ದರು.
ಇದೇ ಸಂದರ್ಭ ಸ್ವಚ್ಛತಾ ಪ್ರತಿಜ್ಞಾವಿಧಿಯನ್ನು ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಗಿರೀಶ್ ನಂದನ್ ಬೋಧಿಸಿದರು. ಮೂವರು ಸ್ವಚ್ಛತಾ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜ್ಞಾನೇಶ್ ಸ್ವಾಗತಿಸಿದರು, ನಾಗರಾಜ್ ಬಜಾಲ್ ವಂದಿಸಿ ನಿಸರ್ಗ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
ಬೋಟ್ ಚಲಾಯಿಸಿದ ಬ್ರಿಜೇಶ್ ಚೌಟ
ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಅವರು ಬೆಂಗರೆಯಲ್ಲಿ ನಡೆದ ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಹಿಂದಿರುಗುವಾಗ ಸ್ವತ: ಬೋಟ್ ಚಲಾಯಿಸಿದರು.







