ಮರಗಳನ್ನು ಉಳಿಸಿಕೊಂಡು ನಗರ ಅಭಿವೃದ್ಧಿಯಾಗಲಿ: ಸಾರ್ವಜನಿಕ ಅಹವಾಲು ಸಭೆಯಲ್ಲಿ ಪರಿಸರ ಪ್ರಿಯರ ಆಗ್ರಹ
ಕೆಪಿಟಿ- ನಂತೂರು ಹೆದ್ದಾರಿ ಅಗಲೀಕರಣ

File Photo
ಮಂಗಳೂರು, ಸೆ.2: ನಗರದಲ್ಲಿ ಬೇಸಿಗೆಯಲ್ಲಿ ನೀರಿಗಾಗಿ ಪರದಾಟ ಕಂಡು ಬಂದರೆ, ಮಳೆಗಾಲದಲ್ಲಿ ಪ್ರವಾಹದ ಭೀತಿ. ಈ ಬಾರಿಯ ಮಳೆಗಾಲದಲ್ಲಿ ಶಿರೂರು, ಕೇರಳದ ವಯನಾಡ್ನಲ್ಲಿ ನಡೆದ ದುರುಂತಗಳು ನಮ್ಮ ಮುಂದೆಯೇ ಇರುವಾಗ ಅಭಿವೃದ್ಧಿಗೆ ವಿರೋಧವಿಲ್ಲ. ಆದರೆ, ಪರಿಸರ ಸಮತೋಲನಕ್ಕೆ ಪೂರಕವಾಗಿ ಇರಬೇಕಾದ ಮರಗಳನ್ನು ಕಡಿದು ಮಾಡುವ ಅಭಿವೃದ್ಧಿ ಬೇಡ. ಇರುವ ಮರಗಳನ್ನು ಉಳಿಸಿಕೊಂಡು ಅಭಿವೃದ್ಧಿ ಕಾರ್ಯ ಆಗಲಿ ಅಭಿಪ್ರಾಯ ಪರಿಸರಾಸಕ್ತರಿಂದ ವ್ಯಕ್ತವಾಗಿದೆ.
ಕೆಪಿಟಿಯಿಂದ ನಂತೂರುವರೆಗಿನ ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಿಸಿ 99 ಮರ ಕಡಿಯುವ ಕುರಿತಂತೆ ಹೊಯ್ಗೆಬಜಾರ್ ನಲ್ಲಿರುವ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ನಗರದ ಪರಿಸಾರಕ್ತರು ಮರಗಳನ್ನು ಕಡಿಯವುದನ್ನು ವಿರೋಧಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ಸಭೆಯ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಕೆಪಿಟಿಯಿಂದ ನಂತೂರುವರೆಗೆ ರಸ್ತೆ ಅಭಿವೃದ್ಧಿಗಾಗಿ 350 ಮೀಟರ್ ಅಂತರದಲ್ಲಿ ಎನ್ಎಚ್ಎಐನವರು 99 ಮರಗಳನ್ನು ಕಡಿಯಲು ಗುರುತಿಸಿದ್ದಾರೆ. 50ಕ್ಕಿಂತ ಹೆಚ್ಚಿನ ಮರಗಳನ್ನು ಕಡಿಯುವ ಸಂದರ್ಭ ನಿಯಮಾನುಸಾರ ಸಾರ್ವಜನಿಕರ ಅಹವಾಲು ಪಡೆಯುವ ನಿಟ್ಟಿನಲ್ಲಿ ಸಭೆ ನಡೆಸಲಾಗುತ್ತಿದ್ದು, ಸಭೆಯಲ್ಲಿ ಹಾಜರಾದ ಸಾರ್ವಜನಿಕರಿಂದ ಲಿಖಿತವಾಗಿ ಅಹವಾಲುಗಳನ್ನು ಸ್ವೀಕರಿಸುತ್ತಿರುವುದಾಗಿ ತಿಳಿಸಿದರು.
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್ಇಸಿಎಫ್)ನ ಸಂಚಾಲಕ ಶಶಿಧರ ಶೆಟ್ಟಿ ಮಾತನಾಡಿ, ಕೆಪಿಟಿಯಿಂದ ನಂತೂರುವರೆಗೆ ಕಾಮಗಾರಿ ಆರಂಭವಾಗಿಲ್ಲ. ಹಾಗಿದ್ದರೂ ಈಗಾಗಲೇ ನೂರಾರು ಮರಗಳನ್ನು ಕಡಿಯಲಾಗಿದೆ. ಕಾಮಗಾರಿ ಆರಂಭವಾಗುವ ಸಂದರ್ಭ ಮರಗಳನ್ನು ಕಡಿದರೆ ಅಷ್ಟರವರೆಗೆ ಆಮ್ಲಜನಕವನ್ನು ಜನರು ಪಡೆಯಬಹುದು. ಯೋಜನೆಯ ಡಿಪಿಆರ್ನಲ್ಲೇ ಈ ಬಗ್ಗೆ ಸ್ಪಷ್ಟತೆ ಇದ್ದರೆ, ಉಳಿಸಬಹುದಾದ ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವಾಗಲಿದೆ. ಹೆದ್ದಾರಿ ಪ್ರಾಧಿಕಾರ ಹಸಿರು ನೀತಿಯನ್ನು ಪಾಲಿಸುತ್ತಿಲ್ಲ. ಶಿರೂರಿನಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಎನ್ಜಿಟಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 2004- 2017ರವರೆಗೆ ಮನಪಾ ಸಂಗ್ರಹ ಮಾಡಿರುವ ಸುಮಾರು 17 ಕೋಟಿ ರೂ. ಗ್ರೀನ್ ಸೆಸನ್ನು ಮನಪಾ, ಹಸಿರೀಕರಣ ಉದ್ದೇಶಕ್ಕೆ ಬಳಕೆ ಮಾಡುತ್ತಿಲ್ಲ, ಬೇರೆ ಉದ್ದೇಶಕ್ಕೆ ಬಳಸದೆ ಬೇರೆ ಉದ್ದೇಶಕ್ಕೆ ಬಳಸಲಾಗಿದೆ ಎಂದು ಆಕ್ಷೇಪಿಸಿದರು.
ಮನಪಾ ಸದಸ್ಯ ಮನೋಹರ್ ಕದ್ರಿ ಮಾತನಾಡಿ, ಪರಿಸರ ಕಾಳಜಿಯ ಜತೆಗೆ ಕ್ಷೇತ್ರ ಅಭಿವೃದ್ಧಿಯೂ ಅಗತ್ಯವಿದೆ. ನಗರದಲ್ಲಿ ಅಪಾರ್ಟ್ಮೆಂಟ್ಗಳ ನಿರ್ಮಾಣದ ವೇಳೆ ಸಾಕಷ್ಟು ಮರಗಳನ್ನು ಕಡಿಯಲಾಗುತ್ತದೆ. ಆವಾಗ ಇಲ್ಲದ ಕಾಳಜಿ ಈ ರೀತಿ ಸಾರ್ವಜನಿಕ ಉಪಯೋಗದ ಅಭಿವೃದ್ದಿ ಕಾರ್ಯಗಳಿಗೆ ಮರ ಕಡಿಯುವಾಗ ಆಕ್ಷೇಪ ಸರಿಯಲ್ಲ. ನಂತೂರಿನಲ್ಲಿ ಆಗುತ್ತಿರುವ ಸಂಚಾರ ದಟ್ಟಣೆಯಿಂದ ಆಂಬುಲೆನ್ಸ್ ಕೂಡಾ ಬ್ಲಾಕ್ ಆಗಿ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ, ಹಾಗಾಗಿ ಅಗಲೀಕರಣಕ್ಕೆ ಅಡ್ಡಿ ಬೇಡ ಎಂದರು.
ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ನಗರದಲ್ಲಿ ಹಲವು ಮರಗಳನ್ನು ಕಡಿಯಲಾಗಿದೆ. ಹಾಗಾಗಿ ಇದೀಗ ಕಡಿದ ಮರಗಳ ಬದಲಿಗೆ ಎಲ್ಲಿ ಮರಗಳನ್ನು ಬೆಳೆಸಲಾಗುತ್ತದೆ. ಬದುಕುಳಿಯಲು ಸಾಧ್ಯವಿರುವ ಮರಗಳನ್ನು ಎಲ್ಲಿ ಸ್ಥಳಾಂತರಗೊಳಿಸಲಾ ಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಎನ್ಇಸಿಎಫ್ನ ಹರೀಶ್ ರಾಜ್ ಕುಮಾರ್ ಆಗ್ರಹಿಸಿದರು.
ನಗರದಲ್ಲಿ ಇದುವರೆಗೆ ಮರಗಳನ್ನು ಸ್ಥಳಾಂತರಿಸುವ ಬಗ್ಗೆ ಯಾವುದೇ ನಿಗದಿತ ಮಾರ್ಗಸೂಚಿ ಇಲ್ಲ. ಕೆಪಿಟಿ ನಂತೂರಿ ನಂತಹ ಭಾಗದಲ್ಲಿ 80 ಕಿ.ಮೀ ವೇಗದ ಹೆದ್ದಾರಿ ವಾಹನ, 40-50 ಕಿ.ಮೀ ವೇಗದ ನಗರದ ವಾಹನಗಳು ಒಟ್ಟಿಗೆ ಹೋಗು ವುದೇ ಅವೈಜ್ಞಾನಿಕ, ಅದಕ್ಕಾಗಿ ವರ್ತುಲ ರಸ್ತೆಯಂತಹ ಪರ್ಯಾಯ ವ್ಯವಸ್ಥೆ ರೂಪಿಸಬೇಕು ಎಂದು ಪರಿಸರ ಹೋರಾಟಗಾರ ಕಿಶೋರ್ ಅತ್ತಾವರ ಅಭಿಪ್ರಾಯಿಸಿದರು.
ಕೆಪಿಟಿ ನಂತೂರು ಬಳಿ ಇರುವ ಮರಗಳು ಯಾವ ರೀತಿಯದ್ದು, ಅವುಗಳಿಂದ ಆಮ್ಲಜನಕ ಸಿಗುತ್ತದೆಯೋ ಎಂಬ ಬಗ್ಗೆ ಮಾಹಿತಿ ಅಗತ್ಯವಿದೆ ಎಂದು ಸಾರ್ವಜನಿಕರೊಬ್ಬರು ಹೇಳಿದಾಗ, ಸಭೆಯಲ್ಲಿ ಸೇರಿದ್ದವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಈ ಸಂದರ್ಭ ಸಹಾಯಕ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ಪ್ರತಿಕ್ರಿಯಿಸಿ, ಎಲ್ಲಾ ಮರಗಳು ಆಮ್ಲಜನಕ ನೀಡುತ್ತವೆ. ಆದರೆ ಕೆಲ ಮರಗಳ ನಿಗದಿತ ಜೀವಿತಾವಧಿಯ ಬಳಿಕ ಅವುಗಳಲ್ಲಿ ಆಮ್ಲಜನಕ ಉತ್ಪತ್ತಿಯಲ್ಲಿ ಬದಲಾವಣೆ ಆಗಬಹುದು ಅಷ್ಟೇ ಎಂದರು.
ಸಭೆಯಲ್ಲಿ ರಸ್ತೆ ಸುರಕ್ಷತೆ, ಪರಿಸರ ಸಂಘಟನೆಗಳ ಮುಖಂಡರಾದ ಜೆರಾರ್ಡ್ ಟವರ್ಸ್, ಜಿ.ಕೆ. ಭಟ್, ಸುರೇಶ್ ನಾಯ್ಕ್, ಸಂಜಯ್ ಪ್ರಭು, ಬೆನೆಡಿಕ್ಟ್ ಫೆರ್ನಾಂಡಿಸ್, ವಕೀಲೆ ಸುಮನ ನಾಯಕ್, ನಂದಗೋಪಾಲ್ ಮೊದಲಾವದರು ಅಭಿಪ್ರಾಯ ವ್ಯಕ್ತಪಡಿಸಿದರು.
ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಎನ್ಎಚ್ಎಐ ಸೈಟ್ ಇಂಜಿನಿಯರ್ ನವೀನ್, ಯುವ ತೋಟಗಾರಿಕಾ ತಜ್ಞೆ ಆಶಿಕಾ ಉಪಸ್ಥಿತರಿದ್ದರು.
ಮರ ನೆಡಲು ಜಾಗ ತಿಳಿಸಿ
ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಕಡಿದ ಮರಗಳ ಬದಲಿಗೆ ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಮರಗಳನ್ನು ನೆಡಲು ನಿರ್ಧರಿಸಲಾಗಿದೆ. ಆದರೆ ಅದಕ್ಕೆ ಜಾಗ ಅಗತ್ಯವಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ, ಹೆದ್ದಾರಿ ಅಗಲೀಕರಣಕ್ಕೆ 99 ಮರಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮನವಿ ಸಲ್ಲಿಸಿದ್ದು, ಅದರಲ್ಲಿ ಸ್ಥಳಾಂತರಿಸಲು ಸಾಧ್ಯ ವಾಗುವ ಹಾಗೂ ಯಾವ ಮರಗಳು ಬದುಕುಳಿಯಬಹುದು ಎಂಬುದನ್ನು ಖುದ್ದಾಗಿ ತಾನು ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಕೆಪಿಟಿ-ನಂತೂರು ಮಧ್ಯೆ 40 ಮೀಟರ್ ಅಗಲವಾಗಿ ಇರಲಿದೆ. 8 ಮೀಟರ್ ಅಗಲದ ಸರ್ವಿಸ್ ರಸ್ತೆ ಇರಲಿದೆ. ಹೆದ್ದಾರಿ ಅಂಡರ್ಪಾಸ್ ಆಗಿ ಸಾಗಲಿದೆ, ಬೆಂಗಳೂರಿಗೆ ಹೋಗುವ ವಾಹನಗಳು ಸರ್ವಿಸ್ ರಸ್ತೆ ಮೂಲಕ ಸಾಗುತ್ತವೆ ಎಂದರು. ಅಂಡರ್ಪಾಸ್ನಲ್ಲಿ ನೀರು ನಿಲ್ಲದಂತೆ ಒಳಚರಂಡಿ ವ್ಯವಸ್ಥೆ ಸೇರಿದಂತೆ ಸಕಲ ವಿನ್ಯಾಸ ಮಾಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮ್ಯಾನೇಜರ್ ಚಂದ್ರಶೇಖರ್ ತಿಳಿಸಿದರು.
‘ಮರವನ್ನು ಕೇವಲ ಮರವಾಗಿ ನೋಡಬಾರದು. ಅದರಲ್ಲಿ ಪಕ್ಷಿ, ಸಣ್ಣ ಕೀಟಗಳೂ ವಾಸ ಪಡೆಯುತ್ತವೆ. ಹಾಗಾಗಿ ಮರ ಗಳನ್ನು ಸ್ಥಳಾಂತರಿಸುವ ಸಂದರ್ಭ ಸೂಕ್ತ ಕ್ರಮ ಆಗಬೇಕು. ಮಂಗಳೂರಿನಲ್ಲಿ ಮರ ಕಡಿದು ವಾಮಂಜೂರಿನಲ್ಲಿ ಮರ ನೆಟ್ಟರೆ ಏನೂ ಪ್ರಯೋಜನ ಅಗುವುದಿಲ್ಲ. ನಗರ ಪ್ರದೇಶಗಳಲ್ಲಿ ಶೇ. 33ರಷ್ಟು ಹಸಿರು ಹೊದಿಕೆ ಇರಬೇಕಾದರೂ ಮಂಗಳೂರು ನಗರದಲ್ಲಿ ಶೇ. 6.2ರಷ್ಟು ಮಾತ್ರವಿದೆ. ಹಾಗಾಗಿ ಇರುವ ಮರಗಳನ್ನು ಉಳಿಸುವ ಜತೆಗೆ ಇನ್ನಷ್ಟು ಮರ ಗಳನ್ನು ನೆಡುವ ಕೆಲಸ ಆಗಬೇಕು’ ಎಂದು ಭುವನ್ ಎಂಬ ಯುವಕ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದಾಗ ಸೇರಿದ್ದವರಿಂದ ಕರತಾಡನ ವ್ಯಕ್ತವಾಯಿತು.
‘ಜನಪ್ರತಿನಿಧಿಗಳು ಮಂಗಳೂರು ನಗರವನ್ನು ಸಿಂಗಾಪುರ ಮಾಡಲು ಹೊರಟಿದ್ದಾರೆ. ಆದರೆ ಸಿಂಗಾಪುರ ನಗರವು ಶೇ. 44ರಷ್ಟು ಹಸಿರು ಮರಗಿಡಗಳಿಂದ ಆವೃತವಾಗಿದೆ. ಆದರೆ ಮಂಗಳೂರು ನಗರವು ಕೇವಲ ಶೇ. 6.2ರಷ್ಟು ಮಾತ್ರವೇ ಹಸಿರು ಹೊದಿಕೆ ಹೊಂದಿದೆ. ದೇಶದಲ್ಲಿ 2 ಲಕ್ಷ ಜನ ವಾಯು ಮಾಲಿನ್ಯನಿಂದ ಸಾಯುತ್ತಿದ್ದಾರೆ. ಹಾಗಾಗಿ ಮರಗಳಿಂದ ರಸ್ತೆಯಲ್ಲಿ ಅಪಘಾತ ಸಂಭವಿಸುತ್ತಿಲ್ಲ. ಹೊಂಡ ಗುಂಡಿ, ಅವೈಜ್ಞಾನಿಕ ಕಾಮಗಾರಿ ಬಗ್ಗೆ ಎಚ್ಚರಿಕೆ ವಹಿಸುತ್ತಾ ಮರಗಳನ್ನು ಉಳಿಸುವ ಕಾರ್ಯ ಆಗಬೇಕು’ ಎಂದು ಪರಿಸರವಾದಿ ಜೀತ್ ಮಿಲನ್ ರೋಚ್ ಅಭಿಪ್ರಾಯಿಸಿದರು.







