ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಕೆಲಸವಾಗಲಿ: ಉಮರ್ ಟೀಕೆ
ಮೀಫ್ ವಾರ್ಷಿಕ ಸಮಾವೇಶ ಮತ್ತು ಎಕ್ಸಲೆನ್ಸ್ ಅವಾರ್ಡ್ ಸಮಾರಂಭ

ಮಂಗಳೂರು: ಮುಖ್ಯಮಂತ್ರಿಯಾಗಿ ರಾಜ್ಯಾದ್ಯಂತ ಭಾರೀ ಜನಪ್ರಿಯತೆ ಗಳಿಸಿದ ಬಂಗಾರಪ್ಪನವರ ಪುತ್ರರಾದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಒಂದೆರಡು ಕ್ರಾಂತಿಕಾರಿ ಕೆಲಸಗಳು ಆಗಲಿ ಎಂದು ಆಶಿಸುತ್ತೇವೆ ಎಂದು ಮೀಫ್‌ನ ಗೌರವಾಧ್ಯಕ್ಷ ಉಮರ್ ಟೀಕೆ ಅಭಿಪ್ರಾಯಪಟ್ಟರು.
ಜೆಪ್ಪಿನಮೊಗರು ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಆಡಿಟೋರಿಯಂನಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಇದರ ವಾರ್ಷಿಕ ಸಮಾವೇಶ ಮತ್ತು ಎಕ್ಸಲೆನ್ಸ್ ಅವಾರ್ಡ್ ಸಮಾರಂಭದಲ್ಲಿ ಅವರು ದಿಕ್ಚೂಚಿ ಭಾಷಣ ಮಾಡಿದರು.
ನಮಗೆ ಇವತ್ತು ನಾವು ಮುಸ್ಲಿಮರು ಎನ್ನುವುದಕ್ಕೆ ಅಭಿಮಾನವಿದೆ. ಅದರಲ್ಲೂ ನಾವು ತುಳುನಾಡಿನ ಮಣ್ಣಿನ ಮಕ್ಕಳು ಎನ್ನುವುದಕ್ಕೆ ಬಹಳಷ್ಟು ಅಭಿಮಾನವಾಗುತ್ತದೆ . 18ನೇ ಶತಮಾನದ ಅಂತ್ಯದ ವರೆಗೆ ಮುಸ್ಲಿಂ ವರ್ತಕ ಸಮಾಜ ಪ್ರಭಾವಿಯಾಗಿದ್ದರು. ಬಂಟರೊಂದಿಗೆ ವ್ಯವಸಾಯಗಾರರಾಗಿ, ಬಿಲ್ಲವ , ಬ್ರಾಹ್ಮಣರೊಂದಿಗೆ ತೋಟಗಾರರಾಗಿ , ಮೊಗವೀರರೊಂದಿಗೆ ಮೀನುಗಾರರಾಗಿ, ಕೊಂಕಣರೊಂದಿಗೆ ವರ್ತಕರಾಗಿ ಒಂದೇ ತಾಯಿ ಮಕ್ಕಳಂತೆ ಬಾಳಿದವರು. ಆದರೆ 150 ವರ್ಷಗಳ ಹಿಂದೆ ನಮ್ಮ ಸಮುದಾಯ ಶೈಕ್ಷಣಿಕವಾಗಿ , ಸಾಮಾಜಿಕವಾಗಿ ಹಿಂದುಳಿಯಿತು. ಯಾವ ಸಮುದಾಯ ತನ್ನ ಸ್ಥಿತಿಯನ್ನು ಸುಧಾರಿಸಿಕೊಳ್ಳುವ ಬಗ್ಗೆ ಸ್ವತ ಪ್ರಯತ್ನವನ್ನು ಮಾಡುವುದಿಲ್ಲವೂ ಅಲ್ಲಿಯವರೆಗೆ ಅಲ್ಲಾಹನು ಆ ಸಮುದಾಯದ ಸ್ಥಿತಿಯನ್ನು ಏರಿಸಲಾರ ಎಂದು ಕುರ್ ಆನ್‌ನಲ್ಲಿ ಅರ್ಥಗರ್ಭಿತವಾದ ವಾಕ್ಯ ಇದೆ. 35-40 ವರ್ಷಗಳ ಹಿಂದೆ ಇದ್ದ ನಮ್ಮ ಸ್ಥಿತಿಯನ್ನು ಬದಲಾಯಿಸಲು ನಮ್ಮ ಸಮುದಾಯದವರು ಮುಂದಾದರು. ಇದರ ನೇತೃತ್ವವನ್ನು ವಹಿಸಿದವರು ಮಾಜಿ ಸಚಿವ ಬಿ.ಎ. ಮೊಯ್ದೀನ್ ಸಾಹೇಬರು. ಅವರು ಊರೂರು ತಿರುಗಿ ಜಾಗೃತಿ ಮೂಡಿಸಿದ ಫಲವಾಗಿ ಹುಟ್ಟಿಕೊಂಡ ಶಾಲೆಗಳ ಸಂಖ್ಯೆ ಇಂದು 175ಕ್ಕೆ ಏರಿದೆ. ಹಲವು ಪದವಿ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ಪ್ರಾರಂಭಗೊಂಡಿವೆ. ಬೆಂಗಳೂರಿನಲ್ಲಿ ಪ್ರೆಸಿಡೆನ್ಸಿ ಮತ್ತು ಮಂಗಳೂರಿನಲ್ಲಿ ಯೆನೆಪೋಯ ವಿವಿ ಸ್ಥಾಪನೆಗೊಂಡಿವೆ. ಇವು ಸಮುದಾಯದ ಎರಡು ಪ್ರತಿಷ್ಠಿತ ವಿವಿಗಳಾಗಿವೆ. ಮುಸ್ಲಿಂ ಶಿಕ್ಷಣ ಸಂಸ್ಥೆಗಳಲ್ಲಿ ಶೇ95ರಷ್ಟು ಮಂದಿ ಇತರ ಸಮುದಾಯಗಳ ಶಿಕ್ಷಕರು. ಅವರು ಬೇರೆ ಎಲ್ಲಿಯೂ ಕೆಲಸ ಸಿಗದ ಕಾರಣಕ್ಕಾಗಿ ಮೀಫ್ ಸಂಸ್ಥೆಗಳಿಗೆ ಸೇರಿದ್ದಲ್ಲ. 25-35 ವರ್ಷಗಳಿಂದ ನಮ್ಮೊಂದಿಗಿದ್ದಾರೆ. ಅವರಿಗೆ ನಮ್ಮ ಮಕ್ಕಳ ಮೇಲೆ ಇರುವ ಕಾಳಜಿಯಿಂದಾಗಿ ನಮ್ಮೊಂದಿಗೆ ಇದ್ದಾರೆ. ಈ ಎಲ್ಲ ಶಾಲೆಗಳ ಒಕ್ಕೂಟ ಮೀಫ್ ಆಗಿದೆ ಎಂದು ಉಮರ್ ಟೀಕೆ ವಿವರಿಸಿದರು.
ನಮ್ಮ ಶಿಕ್ಷಣ ಸಂಸ್ಥೆಗಳ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸ್ಥಾಪಿಸಿದ ಸಂಸ್ಥೆ ಮೀಫ್. ಆದರೆ ಸಮಸ್ಯೆಗಳ ಪರಿಹಾರ ಮಾತ್ರ ಕಂಡುಕೊಳ್ಳುತ್ತಾ ಹೋದರೆ ನಮ್ಮ ಸಮಸ್ಯೆಗಳು ಇಲ್ಲವಾಗುವುದು ಯಾವಾಗ ಎಂಬ ಪ್ರಶ್ನೆ ಬಂತು. ಆಗ ನಾವು ಶಿಕ್ಷಣ ಮಾರ್ಗದರ್ಶನ ಶಿಬಿರಗಳನ್ನು ಶುರು ಮಾಡಿದೆವು. ಮೀಫ್‌ನಲ್ಲಿ ನಡೆಯುವಷ್ಟು ತರಬೇತಿ ಕಾರ್ಯಕ್ರಮಗಳು ಕರ್ನಾಟಕದ ಎಲ್ಲಿಯೂ ನಡೆಯುವುದಿಲ್ಲ. ಪರಿಸರದ ಅತ್ಯಂತ ಹಿಂದುಳಿದ ಮಕ್ಕಳಿಗೆ ತರಬೇತಿ ನೀಡಿ ಅವರನ್ನು ಶೇ 80 ಅಂಕಗಳನ್ನು ಪಡೆದು ಪಾಸಾಗುವಂತೆ ಮಾಡಲಾಗಿದೆ. ಯೆನಪೋಯ ವಿವಿ 100 ಮಕ್ಕಳಿಗೆ ವಸತಿಯೊಂದಿಗೆ ಶಿಕ್ಷಣಕ್ಕೆ ಕಳೆದ ಒಂದು ವರ್ಷದಲ್ಲೇ 71 ಲಕ್ಷ ರೂ. ವೆಚ್ಚ ಭರಿಸಿದ್ದಾರೆ. ಈ ವರ್ಷ ಮೀಫ್ ಫಲಿತಾಂಶ ಶೇ 98. ಸಾವಿರ ಮಕ್ಕಳು ಮೀಫ್ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. 6 ಸಾವಿರ ಶಿಕ್ಷಕರಿದ್ದಾರೆ ಎಂದು ಉಮರ್ ಟೀಕೆ ಹೇಳಿದರು.
ನಮಗೆ ಕಳೆದ ಮೂವತ್ತು ವರ್ಷಗಳಲ್ಲಿ ಸರಕಾರದಿಂದ ಯಾವುದೇ ಸವಲತ್ತು ಬಂದಿಲ್ಲ. ದೇಶದಲ್ಲಿ ಉದ್ಯಮ ಬರುವಾಗ ಅವರು ಉದ್ಯೋಗ ಸೃಷ್ಟಿಸುತ್ತಾರೆ ಎಂಬ ಕಾರಣಕ್ಕೆ ಉಚಿತ ವಿದ್ಯುತ್, ಜಾಗ, ರಿಯಾಯತಿ ಕೊಡುತ್ತೇವೆ. ಆ ಬಗ್ಗೆ ನಮಗೆ ಆಕ್ಷೇಪವಿಲ್ಲ. ಆದರೆ ಮೂಲಭೂತ ಆವಶ್ಯಕತೆಯಾದ ಶಾಲೆಗಳನ್ನು ಸ್ಥಾಪಿಸುವಾಗ ಏನನ್ನೂ ಕೊಡುವುದಿಲ್ಲ. ಬಿಸಿಯೂಟ, ಅನುದಾನ ಯಾವುದೂ ನಮಗೆ ಸಿಗುತ್ತಿಲ್ಲ. ಕನಿಷ್ಠ ಸರಕಾರಿ ಶಾಲೆಗಳಿಗೆ ನೀಡುವ ತರಬೇತಿಯಲ್ಲಿ ನಮ್ಮ ಶಾಲೆಗಳ ಶಿಕ್ಷಕರನ್ನು ಸೇರಿಸುವುದಿಲ್ಲ ಎಂದು ಉಮರ್ ಟೀಕೆ ಅವರು ಸರಕಾರದ ಗಮನ ಸೆಳೆದರು.







