ವೇದವ್ಯಾಸರು 13 ಕಡೆ ಗುದ್ದಲಿ ಪೂಜೆ ನಡೆಸಿದ ಕಾಮಗಾರಿ ಕಥೆ ಏನಾಗಿದೆ ಎಂದು ಉತ್ತರಿಸಲಿ: ಸಂತೋಷ್ ಬಜಾಲ್

ಮಂಗಳೂರು ಫೆ.10: ಮಂಗಳೂರು ನಗರ ಪಾಲಿಕೆಯ ಸಾವಿರಾರೂ ಕೋಟಿ ರೂಪಾಯಿ ಅನುದಾನಗಳಲ್ಲಿ ಬಜಾಲ್ ವಾರ್ಡಿನ ಅಭಿವೃದ್ಧಿಗೆ ಬಿಡಿಗಾಸೂ ಈವರೆಗೂ ಮೀಸಲಿಟ್ಟಿಲ್ಲ. ಶಾಸಕ ವೇದವ್ಯಾಸರು ಈ ಭಾಗದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ 13 ಕಡೆಗಳಲ್ಲಿ ನಡೆಸಿದ ಗುದ್ದಲಿ ಪೂಜೆ ವರ್ಷ ಕಳೆದರೂ ಕಾಮಗಾರಿ ಕೆಲಸ ಪ್ರಾರಂಭಗೊಳ್ಳಲೇ ಇಲ್ಲ ಎಂದರೆ ಈ ಕಾಮಗಾರಿಯ ಕಥೆ ಏನಾಗಿದೆ ಈ ಬಗ್ಗೆ ಶಾಸಕರು ಉತ್ತರಿಸಲಿ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್‌ಒತ್ತಾಯಿಸಿದ್ದಾರೆ.
ಜಲ್ಲಿಗುಡ್ಡೆಯ ಮುಖ್ಯರಸ್ತೆ ಅಗಲೀಕರಣ, ಕಾಂಕ್ರಟೀಕರಣ ಸೇರಿದಂತೆ ಒಳಚರಂಡಿ, ಜಯನಗರದಿಂದ ಪಕ್ಕಲಡ್ಕ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆ ಸಮಸ್ಯೆಗಳ ಬಗೆಹರಿಸಲು ಒತ್ತಾಯಿಸಿ ಸೋಮವಾರ ಬಜಾಲ್ ಜಲ್ಲಿಗುಡ್ಡೆ ಕ್ರಾಸ್ ಬಳಿ ಡಿವೈಎಫ್ಐ ಬಜಾಲ್ ಜಲ್ಲಿಗುಡ್ಡೆ ಘಟಕದ ವತಿಯಿಂದ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಡಿವೈಎಫ್ಐ ಬಜಾಲ್ ವಾರ್ಡಿನ ಅಭಿವೃದ್ಧಿ ಪ್ರಶ್ನೆ ಇಟ್ಟು ಪ್ರತಿಭಟಿಸಲು ಮುಂದಾದಾಗ ರಾತ್ರೋರಾತ್ರಿ ಕಟೌಟ್ ಗಳನ್ನು ನಿಲ್ಲಿಸಿ ಇಲ್ಲಿನ ಶಾಸಕರು 17ಕೋಟಿ ಅನುದಾನ ತರಲು ಪ್ರಯತ್ನಿಸಿದ್ದಾರೆಂದು ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುವ ನಿಮ್ಮ ನೀಚ ರಾಜಕೀಯಕ್ಕೆ ಈ ಭಾಗದ ಜನ ಬಲಿಯಾಗುವುದಿಲ್ಲ. ಬಜಾಲ್ ಜಲ್ಲಿಗುಡ್ಡೆ ಮುಖ್ಯರಸ್ತೆ, ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಪಾಲಿಕೆಯೊಳಗೆ ಈವರೆಗೂ ಅನುದಾನ ಮೀಸಲಿಟ್ಟಿಲ್ಲ. ಶಾಸಕ ವೇದವ್ಯಾಸ ಕಾಮತ್ ಮತ್ತು ಸ್ಥಳೀಯ ಕಾರ್ಪೊರೇಟರ್ ಬಜಾಲ್ ವಾರ್ಡಿನ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಈ ಪ್ರಶ್ನೆ ಈಡೇರುವವರೆಗೂ ಡಿವೈಎಫ್ಐ ಸ್ಥಳೀಯ ಸಂಘಸಂಸ್ಥೆಗಳ ಸಹಕಾರದೊಂದಿಗೆ ಹೋರಾಡಲಿದೆ ಎಂದರು.
ಜಿಲ್ಲೆಯ ಕಾರ್ಮಿಕ ಸಂಘಟನೆಯ ಮುಂದಾಳು ಸುನೀಲ್ ಕುಮಾರ್ ಬಜಾಲ್ ಮಾತನಾಡುತ್ತಾ, ಶಾಸಕ ವೇದವ್ಯಾಸ ಕಾಮತರ 11ಕೋಟಿಯ ಕಾಮಗಾರಿಗಳು ಎಲ್ಲಿ ನಡೆದಿವೆ ಎಂದು ಅವರೇ ಬಂದು ತೋರಿಸಿಕೊಡಬೇಕಾಗುತ್ತದೆ. ಇವರದು ಕೇವಲ ಅಲ್ಲಲ್ಲಿ ಗುದ್ದಲಿ ಪೂಜೆಯೇ ಹೊರತು ಇನ್ನೇನೂ ಇಲ್ಲ ಎಂದು ವ್ಯಂಗ್ಯವಾಡಿದರು. ಸ್ಥಳೀಯ ಜನಪ್ರತಿನಿಧಿಗಳ ನಾಟಕೀಯ ರಾಜಕಾರಣ ಆದಷ್ಟು ಬೇಗ ಬಯಲುಗೊಳ್ಳಲಿದೆ. ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಮಾಜಿ ಕಾರ್ಪೊರೇಟರ್ ಜಯಂತಿ ಬಿ ಶೆಟ್ಟಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಡಿವೈಎಫ್ಐ ನಗರ ಅಧ್ಯಕ್ಷರಾದ ಜಗದೀಶ್ ಬಜಾಲ್, ಜಿಲ್ಲಾ ಮುಖಂಡರಾದ ರಿಜ್ವಾನ್ ಹರೇಕಳ, ಸ್ಥಳೀಯ ಮುಖಂಡರಾದ ಜಯಪ್ರಕಾಶ್ ಜಲ್ಲಿಗುಡ್ಡೆ, ಗೀತಾ ಜಲ್ಲಿಗುಡ್ಡೆ, ರೋಹಿಣಿ ಜಲ್ಲಿಗುಡ್ಡೆ, ಮೋಹನ್ ಜಲ್ಲಿಗುಡ್ಡೆ, ಅನ್ಸಾರ್ ಫೈಸಲ್ ನಗರ, ಯುವಜನ ಮುಖಂಡರಾದ ಧೀರಾಜ್ ಬಜಾಲ್, ಪ್ರಕಾಶ್ ಶೆಟ್ಟಿ, ವರಪ್ರಸಾದ್, ದೀಕ್ಷಿತ್ ಭಂಡಾರಿ, ಅಶೋಕ್ ಸಾಲ್ಯಾನ್, ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರಾದ ಕಮಲಾಕ್ಷ ಬಜಾಲ್, ಜ್ಯೋತಿಶ್, ಲೀನಾ ಟೀಚರ್, ಪಾಯಸ್, ಸೀತರಾಮ್, ವಿಜಯ ಕುಮಾರ್ ಮೈರ, ಕೇಶವ ಭಂಡಾರಿ, ಜಯಪ್ರಕಾಶ್ ,ಜೋಬಿ ಮುಂತಾದವರು ಭಾಗವಹಿಸಿದ್ದರು.
ಪ್ರತಿಭಟನೆಗೂ ಮುನ್ನ ಜಲ್ಲಿಗುಡ್ಡೆ ಜಯನಗರದಿಂದ ಜಲ್ಲಿಗುಡ್ಡೆ ಕ್ರಾಸ್ ವರೆಗೆ ಮೆರವಣೆಗೆ ನಡೆಯಿತು. ಪ್ರತಿಭಟನೆ ವೇಳೆ ಸ್ಥಳಕ್ಕಾಗಮಿಸಿದ ಪಾಲಿಕೆಯ ಹಿರಿಯ ಕಾರ್ಯಪಾಲಕ ಅಭಿಯಂತರರಾದ ನರೇಶ್ ಶೆಣೈ ಅವರು ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿ ಮನವಿ ಸ್ವೀಕರಿಸಿ ಉತ್ತರಿಸಿದರು. ಬಜಾಲ್ ಜಲ್ಲಿಗುಡ್ಡೆ ಮುಖ್ಯರಸ್ತೆಯ ಅಭಿವೃದ್ಧಿಗೆ ಪಾಲಿಕೆ ಆಡಳಿತದಲ್ಲಿ ಪ್ರಸ್ತಾವಣೆಯಷ್ಟೇ ಬಂದಿದೆ ಹಣ ಮಂಜೂರಾದ ತಕ್ಷಣ ಕಾಮಗಾರಿ ಕೆಲಸ ಕೈಗೊಳ್ಳಲಾಗುವುದು ಎಂದು ಭರವಸೆಯಿತ್ತರು.
ಡಿವೈಎಫ್ಐ ಬಜಾಲ್ ಘಟಕದ ಕಾರ್ಯದರ್ಶಿ ಧೀರಜ್ ಬಜಾಲ್ ಸ್ವಾಗತಿಸಿ ದೀಪಕ್ ಬಜಾಲ್ ನಿರೂಪಿಸಿದರು.