ಮಾನವೀಯತೆಯ ಎದುರು ದ್ವೇಷ ವಿಜೃಂಭಿಸಲು ಅವಕಾಶ ನೀಡದಿರೋಣ: ದ.ಕ. ಜಿಲ್ಲೆಯ ಜನತೆಗೆ ಸ್ಪೀಕರ್ ಖಾದರ್ ಮನವಿ

ಮಂಗಳೂರು: ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವಂತಹ ಕೆಲವು ಘಟನೆಗಳು ಪ್ರತಿಯೊಬ್ಬರಿಗೂ ನೋವನ್ನುಂಟುಮಾಡಿದೆ. ಹಿಂಸಾಚಾರ, ದ್ವೇಷ ಭಾಷಣ ಮತ್ತು ಸಮುದಾಯಗಳ ನಡುವಿನ ಉದ್ವಿಗ್ನತೆ ಇವೆಲ್ಲವೂ ಆಂತರಿಕವಾಗಿ ತೀವ್ರ ಅಶಾಂತಿ, ಆತಂಕವನ್ನುಂಟು ಮಾಡಿವೆ. ಈ ಜಿಲ್ಲೆ ಇಲ್ಲಿನ ಜನರ ಪರಸ್ಪರ ನಂಬಿಕೆಯ ಮತ್ತು ಒಗ್ಗಟ್ಟಿನ ಆಧಾರದ ಮೇಲೆ ನಿರ್ಮಿತವಾಗಿದೆ. ಆದ್ದರಿಂದ ಮಾನವೀಯತೆಯ ಎದುರು ದ್ವೇಷ ವಿಜೃಂಭಿಸಲು ಅವಕಾಶ ನೀಡದಿರೋಣ ಎಂದು ವಿಧಾನಸಭೆಯ ಸ್ಪೀಕರ್, ಮಂಗಳೂರು ಶಾಸಕರೂ ಆಗಿರುವ ಯು.ಟಿ.ಖಾದರ್ ಜನತೆಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ Facebookನಲ್ಲಿ ಪೋಸ್ಟ್ ವೊಂದನ್ನು ಮಾಡಿರುವ ಸ್ಪೀಕರ್, ದಕ್ಷಿಣ ಕನ್ನಡ ಜಿಲ್ಲೆಯು ಜನರ ಪರಸ್ಪರ ನಂಬಿಕೆಯ ಮತ್ತು ಒಗ್ಗಟ್ಟಿನ ಆಧಾರದ ಮೇಲೆ ನಿರ್ಮಿತವಾಗಿದೆ. ಇಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು-ಎಲ್ಲರೂ ತಲೆಮಾರುಗಳಿಂದ ಪ್ರೀತಿ ವಿಶ್ವಾಸದೊಂದಿಗೆ ಜೊತೆಯಾಗಿ ಬದುಕುತ್ತಾ ಬಂದಿದ್ದೇವೆ. ಆದರೆ ಇದೀಗ ಆ ಸಾಮರಸ್ಯ ನಮ್ಮ ಕೈ ತಪ್ಪುತ್ತಿರುವುದು ಸಹಿಸಲಾಧ್ಯವಾದ ಸಂಗತಿಯಾಗಿದೆ. ಅದಕ್ಕೆ ನಾವು ಅವಕಾಶ ನೀಡಬಾರದು ಎಂದವರು ಹೇಳಿದ್ದಾರೆ.
ಪ್ರಸಕ್ತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ವದಂತಿಗಳನ್ನು, ದ್ವೇಷಭರಿತ ಹೇಳಿಕೆಗಳನ್ನು ಅತ್ಯಂತ ವೇಗದಲ್ಲಿ ಹರಡುವ ಮೂಲಕ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಸ್ಪೀಕರ್, ಈಗಾಗಲೇ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದು, ದ್ವೇಷ ಹರಡುವ ಅಥವಾ ಸಮಾಜವನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳು ಯಾರೇ ಆಗಿರಲಿ, ಅವರ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಲೆಕ್ಕಿಸದೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಏನೇ ಇರಲಿ, ಇವೆಲ್ಲವನ್ನೂ ಮೀರಿ, ನಾವು ಒಗ್ಗಟ್ಟಿನಿಂದ, ತಾಳ್ಮೆಯಿಂದ, ಪರಸ್ಪರ ಪ್ರೀತಿ ವಿಶ್ವಾಸ, ಕರುಣೆ ಮತ್ತು ಶಾಂತಿಯಿಂದ ಇರಬೇಕಾದ ಸಮಯ ಇದಾಗಿದೆ. ನಾನು ಎಲ್ಲ ಧರ್ಮಗಳ ಧಾರ್ಮಿಕ ನಾಯಕರೊಂದಿಗೆ ಮತ್ತು ವಿವಿಧ ಸಮುದಾಯಗಳ ಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಮಾಜದಲ್ಲಿ ಶಾಂತಿ ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದೇನೆ. ಮಾನವೀಯತೆಯ ಎದುರು ದ್ವೇಷವು ವಿಜೃಂಭಿಸಲು ನಾವು ಅವಕಾಶ ನೀಡಬಾರದು. ಹಿಂಸೆಯು ನಮ್ಮ ಭವಿಷ್ಯವನ್ನು ವ್ಯಾಖ್ಯಾನಿಸಲು, ನಿರ್ಧರಿಸಲು ಬಿಡಬಾರದು. ಈ ಸಂಕಲ್ಪದಲ್ಲಿ ನಾವೆಲ್ಲರೂ ಜೊತೆಯಾಗೋಣ ಎಂದವರು ದ.ಕ. ಜಿಲ್ಲೆಯ ಜನತೆಗೆ ಕರೆ ನೀಡಿದ್ದಾರೆ.