ಗ್ರಾಮೀಣ ಪ್ರದೇಶದತ್ತ ಒಳಗಣ್ಣು ತೆರೆಯೋಣ: ಡಾ. ನಾಗತಿಹಳ್ಳಿ ಚಂದ್ರಶೇಖರ್

ಮಂಗಳೂರು, ಜ.21: ಭಾರತದ ಬಗ್ಗೆ ಹೊರಗಿನವರು ಏನೇ ಹೇಳಲಿ. ಇಂದಿಗೂ ನಮ್ಮ ದೇಶದ ಹಳ್ಳಿಗಾಡಿನಲ್ಲಿ ಸೌಹಾರ್ದ ಮನೆ ಮಾತಾಗಿದೆ. ಅದೆಷ್ಟೋ ಮಂದಿ ಯಾವುದೇ ಪ್ರತಿಫಲವಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಆ ಮೂಲಕ ದೇಶಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ನಾವು ದೇಶದ ಗ್ರಾಮೀಣ ಪ್ರದೇಶದತ್ತ ಒಳಗಣ್ಣು ತೆರೆಯಬೇಕಾಗಿದೆ ಎಂದು ನಟ, ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಮಂಗಳೂರಿನ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸಂದೇಶ ಸಂಸ್ಥೆಯ ಆವರಣದಲ್ಲಿ ಬುಧವಾರ ನಡೆದ 35ನೇ ವರ್ಷದ ಸಂದೇಶ ಪ್ರಶಸ್ತಿ 2026 ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ತನಗೆ ಪ್ರಶಸ್ತಿ ಸಿಕ್ಕಿಲ್ಲ ಎಂದು ಅಲವತ್ತುಕೊಳ್ಳುತ್ತಲೇ ಅದಕ್ಕಾಗಿಯೇ ತಾನು ಸೇಡು ತೀರಿಸಿಕೊಳ್ಳುತ್ತಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿರುವವರ ಮಧ್ಯೆ ಸಂದೇಶ ಪ್ರತಿಷ್ಠಾನವು ಅರ್ಹ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದ ಡಾ. ನಾಗತಿಹಳ್ಳಿ ಚಂದ್ರಶೇಖರ್, ಜಗತ್ತು ವಿಘಟಿತ ಸಮಾಜವನ್ನು ಕಾಣುತ್ತಿದೆ. ಈ ಸಂದರ್ಭದಲ್ಲಿ ಪ್ರೀತಿ, ದಯೆ, ಕರುಣೆಯ ಪ್ರತೀಕ ಎಂಬಂತೆ ಸಂದೇಶ ಪ್ರತಿಷ್ಠಾನವು ಎಲ್ಲರನ್ನೂ ಒಳಗೊಳ್ಳುವಿಕೆಯ ರೂಪವಾಗಿ ಸಾಧಕರನ್ನು ಜಾತಿ, ಭಾಷೆ, ಧರ್ಮ ನೋಡದೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ. ಹಾಗಾಗಿ ಸಂದೇಶ ಪ್ರಶಸ್ತಿಗೆ ತನ್ನದೇ ಆದ ಮಹತ್ವವಿದೆ. ರಾಜಕಾರಣಿಗಳ ಭಾಷಣದಲ್ಲಿ ಬರುವಂತಹ ಸಾಮರಸ್ಯ ನಮಗೆ ಬೇಡ. ನಿಜವಾದ ಸೌಹಾರ್ದ, ಸಾಮರಸ್ಯಕ್ಕಾಗಿ ನಾವು ಮಿಡಿಯುವರಾಗಿರಬೇಕು ಎಂದು ಹೇಳಿದರು.
ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಬಳ್ಳಾರಿ ಬಿಷಪ್ ಅ.ವಂ. ಡಾ. ಹೆನ್ರಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ಬಿಷಪ್ ಅ.ವಂ. ಡಾ. ಪೀಟರ್ ಪೌಲ್ ಸಲ್ಡಾನಾ, ಶಾಸಕ ವೇದವ್ಯಾಸ ಕಾಮತ್, ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಉಮರ್ ಯು.ಎಚ್., ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಲವಿನಾ ಪಿಂಟೊ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ, ಸಂದೇಶ ಪ್ರತಿಷ್ಠಾನದ ಟ್ರಸ್ಟಿಗಳಾದ ರಾಯ್ ಕ್ಯಾಸ್ಟಲಿನೊ, ವ. ಐವನ್ ಪಿಂಟೋ ಉಪಸ್ಥಿತರಿದ್ದರು.
ಸಂದೇಶ ಪ್ರತಿಷ್ಠಾನ ನಿರ್ದೇಶಕ ವಂ.ಡಾ. ಸುದೀಪ್ ಪೌಲ್ ಸ್ವಾಗತಿಸಿದರು. ಪ್ರಶಸ್ತಿ ಆಯ್ಕೆ ಸಮಿತಿಯ ಡಾ. ನಾ.ದಾ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಕನ್ಸೆಪ್ಟ ಫೆರ್ನಾಂಡಿಸ್, ರೂಪಕಲಾ ಆಳ್ವ, ಬಿ.ಎ. ಮುಹಮ್ಮದ್ ಹನೀಫ್ ಪಾಲ್ಗೊಂಡಿದ್ದರು. ಐರಿನ್ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು.
ಜಾತಿ ಪ್ರಶಸ್ತಿಗಳಿಗೆ ಅರ್ಥವಿಲ್ಲ: ಡಾ. ನಾ. ಮೊಗಸಾಲೆ
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಹಿರಿಯ ಸಾಹಿತಿ ಡಾ. ನಾ.ಮೊಗಸಾಲೆ ಇತ್ತೀಚಿನ ದಿನಗಳಲ್ಲಿ ಜಾತಿ ಪ್ರಶಸ್ತಿಗಳು ಹೆಚ್ಚುತ್ತಿವೆ. ಇದು ಅರ್ಥವಿಲ್ಲ. ಸಾಧನೆಯನ್ನು ಮನ್ನಿಸಿ ಪ್ರಶಸ್ತಿ ನೀಡಿ ಗೌರವಿಸಬೇಕೇ ವಿನಃ ಜಾತಿ ನೋಡಿಯಲ್ಲ. ಹಾಗಾಗಿ ಈ ಜಾತಿ ಪ್ರಶಸ್ತಿ ಎಂಬುದು ಹಾಸ್ಯಾಸ್ಪದವಾಗಿದೆ ಎಂದರು.
ಪ್ರಶಸ್ತಿಗಳ ಹಿಂದೆ ದೊಡ್ಡ ಲಾಬಿ ಇದೆ. ಸ್ವತಃ ನಮ್ಮ ಸಂಸ್ಥೆಯು ಎರಡು ಪ್ರಶಸ್ತಿಗಳನ್ನು ಪ್ರತೀ ವರ್ಷ ನೀಡುತ್ತಾ ಬಂದಿರುವ ಕಾರಣ ಅದರ ಹಿಂದಿನ ಲಾಬಿ, ಒತ್ತಡದ ಅರಿವು ಇದೆ. ಪ್ರಶಸ್ತಿಗೆ ಆಯ್ಕೆ ಮಾಡಲು ತುಂಬಾ ಒತ್ತಡವಿ ರುತ್ತದೆ. ಆಮಿಷ ಒಡ್ಡಲಾಗುತ್ತದೆ. ಪ್ರಾಯೋಜಕರಿಗೂ ಒತ್ತಡ ಹಾಕಲಾಗುತ್ತದೆ. ಪ್ರಶಸ್ತಿ ಪಡೆಯುವುದಕ್ಕಾಗಿ ನನ್ನನ್ನು ಪಂಪನಿಗೆ ಹೋಲಿಸಿದವರೂ ಇದ್ದಾರೆ. ಆದರೆ ಸಂದೇಶ ಪ್ರಶಸ್ತಿಯು ಆ ಲಾಬಿಯಿಂದ ಹೊರತಾಗಿದೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ ಎಂದರು.
*ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾದ ಕಾಂತಾವರ ಕನ್ನಡ ಸಂಘದ ರೂವಾರಿ, ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ, ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾದ ಕೊಂಕಣಿ ಸಾಹಿತಿ ಪ್ಯಾಟ್ರಿಕ್ ಕಾಮಿಲ್ ಮೋರಾಸ್, ಸಂದೇಶ ತುಳು ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿ, ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ, ಸಂದೇಶ ಮಾಧ್ಯಮ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಎಸ್.ಜಿ. ತುಂಗರೇಣುಕ, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿಗೆ ಆಯ್ಕೆಯಾದ ಸಂಗೀತ ಕ್ಷೇತ್ರದ ಸಾಧಕ ಸೈಮನ್ ಪಾಯ್ಸ್, ಸಂದೇಶ ಕಲಾ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಸಂದೇಶ ಶಿಕ್ಷಣ ಪ್ರಶಸ್ತಿಗೆ ಆಯ್ಕೆಯಾದ ಗೊಂಬೆಯಾಟದ ಮೂಲಕ ಪ್ರಸಿದ್ಧಿ ಪಡೆದ ಡಾ. ದತ್ತಾತ್ರೇಯ ಅರಳಿಕಟ್ಟೆ ಹಾಗೂ ಸಂದೇಶ ವಿಶೇಷ ಪ್ರಶಸ್ತಿಗೆ ಆಯ್ಕೆಯಾದ ಬಳ್ಳಾರಿಯ ನವಜೀವನ ರಿಹ್ಯಾಬಿಲಿಟೇಶನ್ ಸೆಂಟರ್ ಫಾರ್ ಡಿಸೇಬಲ್ಡ್ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಫ್ರಾನ್ಸಿನಾ ಪ್ರಶಸ್ತಿ ಸ್ವೀಕರಿಸಿದರು.







