ಸಂಚಾರ ಮುಕ್ತವಾಗದ ಮಹಾಕಾಳಿಪಡ್ಪು ರೈಲ್ವೇ ಕೆಳ ಸೇತುವೆ; ಸಂಬಂಧಪಟ್ಟವರ ಜತೆ ಚರ್ಚೆ: ಯು.ಟಿ.ಖಾದರ್

ಮಂಗಳೂರು, ಡಿ.24: ಕೇರಳ, ಉಳ್ಳಾಲ ಕಡೆಯಿಂದ ಮಂಗಳೂರು ನಗರ ಪ್ರವೇಶಕ್ಕೆ ನೇರ ಅವಕಾಶ ಕಲ್ಪಿಸುವ ಮಹಾಕಾಳಿಪಡ್ಪು ರೈಲ್ವೇ ಕೆಳ ಸೇತುವೆ ಕಾಮಗಾರಿ ಪೂರ್ಣಗೊಂಡರೂ ಸಾರ್ವಜನಿಕ ಸಂಚಾರಕ್ಕೆ ಇನ್ನೂ ಮುಕ್ತಗೊಳಿಸದಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಸಚಿವರ ಜತೆ ಚರ್ಚಿಸುವುದಾಗಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಮಂಗಳೂರು ಸರ್ಕ್ಯೂಟ್‌ಹೌಸ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಅಭಿವೃದ್ಧಿಗೆ ಪೂರಕವಾಗಿ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದ ವೇಳೆ ಈ ಸೇತುವೆ ಕಾಮಗಾರಿಗೆ ಅನುಮೋದನೆಯನ್ನು ಒದಗಿಸಿರುವುದು ನಾನೇ. ನಾನಾ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಇದೀಗ ಬಾಕಿ ಕಾಮಗಾರಿಯನ್ನು ಮುಗಿಸಿ ಶೀಘ್ರವೇ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರನ್ನು ಒಳಗೊಂಡು ಸಂಬಂಧಪಟ್ಟವರ ಜತೆ ಚರ್ಚಿಸಲಾಗುವುದು. ಮಾತ್ರವಲ್ಲದೆ, ಅಲ್ಲಿನ ಸಮಸ್ಯೆಗಳ ಕುರಿತಂತೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲು ಸೂಚಿಸಲಾಗುವುದು ಎಂದರು.
ಜಯದೇವ ಹೃದ್ರೋಗ ಸಂಸ್ಥೆ ಹಾಗೂ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ಘಟಕ (ಸ್ಯಾಟಲೈಟ್ ಕೇಂದ್ರ)ಗಳನ್ನು ಮಂಗಳೂರಿನಲ್ಲಿ ಆರಂಭಿಸುವ ಕುರಿತಂತೆ ಚರ್ಚೆ ನಡೆದಿದೆ. ಗುಲ್ಬರ್ಗ, ಮೈಸೂರಿನಲ್ಲಿಯೂ ಇಂತಹ ಘಟಕಗಳು ನಿರ್ಮಾಣವಾಗಿದ್ದು, ಮಂಗಳೂರಿನಲ್ಲಿಯೂ ನಾಲ್ಕೈದು ಜಿಲ್ಲೆಗಳಿಂದ ಬಡ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿರುವುದರಿಂದ ಈ ಘಟಕ ಆದಾಗ ಪ್ರಯೋಜನವಾಗಲಿದೆ. ಹೃದಯ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿ ಖಾಸಗಿ ಆಸ್ಪತ್ರೆಗಳ ದರದಲ್ಲಿಯೂ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಈ ಬಗ್ಗೆ ಬಜೆಟ್‌ನಲ್ಲಿ ವಿಷಯ ಪ್ರಸ್ತಾವ ಆಗಬೇಕಿದೆ ಎಂದು ಯು.ಟಿ.ಖಾದರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಅಸೆಂಬ್ಲಿಯ ಎಂಬುದು ಕುಟುಂಬದ ರೀತಿ. ಒಳಗಡೆ ಆದ ವಿಚಾರದ ಬಗ್ಗೆ ಹೊರಗಡೆ ಮಾತನಾಡಲು ಬಯಸುವುದಿಲ್ಲ. ಹಾಗಿದ್ದರೂ ಕರಾವಳಿ ಜಿಲ್ಲೆಗೆ ವಿಶೇಷ ಗೌರವ ಇದೆ. ಇಲ್ಲಿನ ಶಾಸಕರು ಸೌಜನ್ಯ, ಸರಳ ಸಜ್ಜನಿಕೆಯವರು ಎಂಬ ಗೌರವ ಹಿಂದಿನಿಂದಲೂ ಇದ್ದು ಅದನ್ನು ಉಳಿಸಬೇಕಿದೆ ಎಂದು ವಿಧಾನಸಭೆ ಅಧಿವೇಶನದ ಸಂದರ್ಭ ಹರಿಕಥೆ ಎಂಬ ಹೇಳಿಕೆಗೆ ಸಂಬಂಧಿಸಿ ವ್ಯಕ್ತವಾದ ಆಕ್ಷೇಪದ ಕುರಿತ ಪ್ರಶ್ನೆಗೆ ಸ್ಪೀಕರ್ ಖಾದರ್ ಉತ್ತರಿಸಿದರು.
16ನೆ ವಿಧಾನಸಭೆಯ 8ನೆ ಅಧಿವೇಶನದ 10 ದಿನಗಳಲ್ಲಿ ಸುಆರು 57 ಗಂಟೆ 35 ನಿಮಿಷಗಳ ಕಾಲ ಕಾರ್ಯಕಲಾಪ ನಡೆಸಲಾಗಿದೆ. ಧನವಿನಿಯೋಗ ವಿಧೇಯಕ ಸೇರಿದಂತೆ ಒಟ್ಟು 22 ವಿಧೇಯಕಗಳನ್ನು ಮಂಡಿಸಿ 2025ನೆ ಸಾಲಿನ ಭ ಕಂದಾಯ (ಎರಡನೆ ತಿದ್ದುಪಡಿ) ಸೇರಿದಂತೆ 23 ವಿಧೇಯಕಗಳನ್ನು ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ ಎಂದು ಅವರು ಹೇಳಿದರು.







