ಮಂಗಳೂರು ವಿಮಾನ ನಿಲ್ದಾಣ |ಆ್ಯಪ್ ಆಧರಿತ ಟ್ಯಾಕ್ಸಿಗಳನ್ನು ಫಾಸ್ಟ್‌ಟ್ಯಾಗ್‌ಗೆ ಒಳಪಡಿಸಲು ಆಗ್ರಹ
ಮಂಗಳೂರು, ಜ.2: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆ್ಯಪ್ ಆಧರಿತ ಟ್ಯಾಕ್ಸಿಗಳನ್ನು ಫಾಸ್ಟ್‌ಟ್ಯಾಗ್ ಒಳಪಡಿಸಬೇಕು. ೧೦೦ರೂ.ಗಳ ಪಾರ್ಕಿಂಗ್ ಹಣವನ್ನು ಕನಿಷ್ಟ ೨೦ ರೂ.ಗಳಿಗೆ ಇಳಿಕೆ ಮಾಡಬೇಕು. ವಾಹನಗಳ ನಿಲುಗಡೆಯ ಕಾಲಾವಕಾಶವನ್ನು ೧೫ ನಿಮಿಷಗಳಿಗೆ ಏರಿಕೆ ಮಾಡಬೇಕು ಎಂದು ದ.ಕ. ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಚಾಲಕರ ಸಂಘ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಬ್ದುಲ್ ರಶೀದ್, ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ನಿರ್ವಹಣೆಗೆ ನೀಡಿದ ಮೇಲೆ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.
ನಗರದಲ್ಲಿ ಆ್ಯಪ್ ಆಧರಿತ ಟ್ಯಾಕ್ಸಿ ಸೇವೆಯಲ್ಲಿ ದುಡಿಯುವ ವಾಹನಗಳು 250ಕ್ಕೂ ಅಧಿಕವಿದ್ದರೂ, 10 ವಾಹನಗಳಿಗೆ ಮಾತ್ರವೇ ವಿಮಾನ ನಿಲ್ದಾಣದಲ್ಲಿ ಅವಕಾಶ ನೀಡಲಾಗಿದೆ. 10ಕ್ಕೂ ಹೆಚ್ಚಿನ ವಾಹನ ಬಂದಾಗ ವಾಪಾಸು ಹೋಗಬೇಕು. ಇಲ್ಲವಾದರೆ ದುಪ್ಪಟ್ಟು ಹಣ ನೀಡಿ ಪಾರ್ಕಿಂಗ್ ಮಾಡಬೇಕು. ಇದರಿಂದ ಚಾಲಕರಿಗೆ ಸರಿಯಾಗಿದುಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಕನಿಷ್ಟ 50 ವಾಹನಗಳಿಗೆ ನಿಲುಗಡೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರೂ ಸಮಸ್ಯೆ ಬಗೆಹರಿಸಲಾಗಿಲ್ಲ. ವಾಣಿಜ್ಯ ವಾಹನಗಳು ಪಾರ್ಕಿಂಗ್ ಮಾಡದೇ ಗ್ರಾಹಕರನ್ನು ಪಿಕ್‌ಅಪ್ ಮಾಡಿ 10 ನಿಮಿಷಗಳಲ್ಲಿ ಕೂಡಲೇ ಹೊರ ಹೋದರೂ 100 ರೂ. ಪಾರ್ಕಿಂಗ್ ಹಣ ಪಾವತಿಸಬೇಕಾಗುತ್ತದೆ. ಇದು ತುಂಬಾ ತೊಂದರೆಯಾಗುತ್ತಿದೆ. ಆ್ಯಪ್ ಆಧಾರಿತ ರೇಡಿಯೋ ಟ್ಯಾಕ್ಸಿ ವಾಹನಗಳಿಗೆ ಗ್ರಾಹಕರನ್ನು ಪಿಕಪ್ ಮಾಡಲು 2ನೇ ಲೈನಿನಲ್ಲಿ ಮಾತ್ರ ಅವಕಾಶನೀಡಲಾಗಿದೆ. ಇದರಿಂದ ಮಳೆ ಬಂದಾಗ 2ನೆ ಲೈನ್‌ಗೆ ಗ್ರಾಹಕರು ಒದ್ದೆಯಾಗಿ ಬರಬೇಕಾಗಿದೆ. ಹಿರಿಯ ನಾಗರಿಕರಿಗೆ ಅಲ್ಲಿವರೆಗೆ ಬರಲು ಕಷ್ಟವಾಗುತ್ತೆ. ಆ್ಯಪ್ ಆಧರಿತ ಟ್ಯಾಕ್ಸಿಯವರು ತಮ್ಮ ವೈಯಕ್ತಿಕ ಬಾಡಿಗೆ ಇದ್ದರೂ ಅದನ್ನು 2ನೇ ಲೈನಲ್ಲಿ ಪಿಕಪ್ ಮಾಡಬೇಕಾದ ನಿಯಮ ಇರುವುದರಿಂದ ಗ್ರಾಹಕರು ಅಸಮಾಧಾನ ಪಡುತ್ತಾರೆ. ಇದರಿಂದ ಬಾಡಿಗೆ ಕಡಿಮೆಯಾಗಿದೆ ಎಂದು ಅವರು ಟ್ಯಾಕ್ಸಿ ಚಾಲಕರ ಸಮಸ್ಯೆ ಬಗ್ಗೆ ವಿವರ ನೀಡಿದರು.
ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಓಲಾ, ಉಬರ್ ಪಾರ್ಕಿಂಗ್ ಹತ್ತಿರ ಚಾಲಕರಿಗೆ ಕುಳಿತುಕೊಳ್ಳಲು ಯಾವುದೇ ಸರಿಯಾದ ಸೌಕರ್ಯಗಳಿಲ್ಲ. ಮಳೆ, ಬಿಸಿಲಿಗೆ ವಾಹನದೊಳಗೆ ಇರಬೇಕಾಗುತ್ತದೆ. ಇದರಿಂದ ದೈಹಿಕ ಸಮಸ್ಯೆ ಕಾಡುತ್ತಿದೆ. ಶೌಚಾಲಯದ ವ್ಯವಸ್ಥೆಯೂ ಇಲ್ಲ. ನಿಲ್ದಾಣದ ನಿರ್ಗಮನ ದ್ವಾರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ವಿಮಾನಗಳು ಒಮ್ಮೆಗೇ ಬಂದಾಗ 2ರಿಂದ 3 ನಿಮಿಷ ವಾಹನಗಳು ಬ್ಲಾಕ್ ಆಗಿ ಗ್ರಾಹಕರನ್ನು ಡ್ರಾಪ್ ಮಾಡಲುಬಂದ ವಾಹನಗಳು 10 ನಿಮಿಷ ದಾಟಿದರೆ 100 ರೂ. ಕಟ್ಟಿಯೇ ಹೋಗಬೇಕಾಗಿದೆ. ಗೇಟಿನಲ್ಲಿ ಬ್ಲಾಕ್ ಆದಾಗ ಈ ರೀತಿ ಚಾಲಕರಿಂದ ಹಣ ಪಡೆಯುವುದು ತೀರಾ ಅನ್ಯಾಯ. ಟ್ಯಾಕ್ಸಿ ಚಾಲಕರ ಸಮಸ್ಯೆ ಬಗೆಹರಿಸಲು ನಿರಾಸಕ್ತಿ ವಹಿಸಿರುವ ಕಾರಣ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಹೇಳಿದರು.
ಗೋಷ್ಟಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅಝೀಝ್, ಮುಖಂಡರಾದ ರಮೇಶ್ ನಾಯಕ್, ಇಮತಿಯಾಝಂ, ಕಮಾಲಾಕ್ಷ ಬಜಾಲ್ ಉಪಸ್ಥಿತರಿದ್ದರು.







