ಮಂಗಳೂರು | ಕ್ಯಾಂಪ್ಕೊ ಆಡಳಿತ ಮಂಡಳಿಗೆ ಚುನಾವಣೆ : ಶೇ 45.53 ಮತದಾನ

ಮಂಗಳೂರು, ನ.23: ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ (ಕ್ಯಾಂಪ್ಕೊ)ದ ಆಡಳಿತ ಮಂಡಳಿಯ ನಿರ್ದೇಶಕರ 19 ಸ್ಥಾನಗಳ ಪೈಕಿ 6 ಸ್ಥಾನಗಳಿಗೆ ಚುನಾವಣೆ ರವಿವಾರ ಶಾಂತಿಯುತವಾಗಿ ನಡೆದಿದ್ದು, ಶೇ 45.53 ಮತದಾನವಾಗಿದೆ.
ನಗರದ ಶಾರದಾ ವಿದ್ಯಾಲಯದಲ್ಲಿ ಬೆಳಗ್ಗೆ 8ರಿಂದ ಸಂಜೆ 3ಗಂಟೆ ತನಕ ನಡೆದ ಮತದಾನದಲ್ಲಿ ಒಟ್ಟು 5,651 ಮಂದಿ ಸದಸ್ಯ ಮತದಾರರ ಪೈಕಿ 2,573 ಮಂದಿ ಮತ ಚಲಾಯಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ಮತ ಎಣಿಕೆ ನ.25ರಂದು ಬೆಳಗ್ಗೆ 8 ಗಂಟೆಯಿಂದ ನಗರದ ಕ್ಯಾಂಪ್ಕೊ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.
ಒಟ್ಟು 19 ನಿರ್ದೇಶಕರ ಸ್ಥಾನಗಳಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ ಆರು ಸ್ಥಾನಗಳಿಗೆ 8 ಮಂದಿ ಕಣದಲ್ಲಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆದಿದೆ.
ಸಿ ಕ್ಲಾಸ್ ಸಾಮಾನ್ಯ ವಿಭಾಗದಿಂದ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಾದ ಸತೀಶ್ಚಂದ್ರ ಎಸ್.ಆರ್.ದಯಾನಂದ ಹೆಗ್ಡೆ, ಮಹೇಶ್ ಚೌಟ ಎಂ , ಮುರಳೀಕೃಷ್ಣ ಕೆ.ಎನ್, ಪುರುಷೋತ್ತಮ ಭಟ್ ಎಂ, ತೀರ್ಥರಾಮ ಎ.ವಿ, ಹಾಗೂ ಸ್ವತಂತ್ರ ಅಭ್ಯರ್ಥಿಗಳಾದ ಸತ್ಯನಾರಾಯಣ ಎಂ.ಜಿ. ಮತ್ತು ರಾಮ ಪ್ರತೀಕ್ ಕೆ ಸ್ಪರ್ಧಾ ಕಣದಲ್ಲಿದ್ದಾರೆ.
13 ಸ್ಥಾನಗಳಿಗೆ ಅವಿರೋಧ ಆಯ್ಕೆ :
ಕೇರಳದ ಎಲ್ಲ ಒಂಬತ್ತು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಸಾಮಾನ್ಯ ಸಿ. ಕ್ಲಾಸ್ ಸ್ಥಾನಗಳಿಗೆ ಸ್ಪರ್ಧಿಸಿದ್ದ ಕೆ.ಸತೀಶ್ಚಂದ್ರ ಭಂಡಾರಿ, ಸದಾನಂದ ಶೆಟ್ಟಿ, ವಿವೇಕಾನಂದ ಗೌಡ ಪಿ, ಕೆ. ಸತ್ಯನಾರಾಯಣ ಪ್ರಸಾದ್, ರಾಧಾಕೃಷ್ಣನ್ ಕೆ , ಗಣೇಶ್ ಕುಮಾರ್ ಎ, ಮಹಿಳಾ ಮೀಸಲು ವಿಭಾಗದಿಂದ ಸೌಮ್ಯ, ಎ ಮತ್ತು ಬಿ ವಿಭಾಗದಿಂದ ವೆಂಕಟರಮಣ ಭಟ್ ವೈ ಮತ್ತು ಪದ್ಮರಾಜ ಪಟ್ಟಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಒಟ್ಟು 10 ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಎ ಮತ್ತು ಬಿ ವಿಭಾಗದಿಂದ ರಾಘವೇಂದ್ರ ಎಚ್.ಎಂ, ಮತ್ತು ವಿಶ್ವನಾಥ ಈಶ್ವರ ಹೆಗಡೆ , ಸಿ ಕ್ಲಾಸ್ ಮಹಿಳಾ ವಿಭಾಗದಿಂದ ಮಾಲಿನಿ ಪ್ರಸಾದ್, ಎಸ್‌ಸಿ -ಎಸ್‌ಟಿ ಮೀಸಲು ಸ್ಥಾನ ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.







