ಮಂಗಳೂರು | ಇಎಸ್‌ಐ ಆಸ್ಪತ್ರೆಗೆ ದಿಲ್ಲಿಯ ಇಎಸ್‌ಐಸಿ ಕೇಂದ್ರ ಕಚೇರಿ ಅಧಿಕಾರಿಗಳ ಭೇಟಿ
ಆಸ್ಪತ್ರೆ ಸೌಲಭ್ಯ ಸುಧಾರಣೆಗೆ ಅಗತ್ಯ ಕ್ರಮದ ಭರವಸೆ

ಮಂಗಳೂರು : ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ನಿರಂತರ ಪ್ರಯತ್ನ ಹಾಗೂ ಮುತುವರ್ಜಿಯ ಫಲವಾಗಿ, ಮಂಗಳೂರಿನ ಶಿವಭಾಗ್‌ನಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಗುರುವಾರ ದಿಲ್ಲಿಯಿಂದ ಇಎಸ್‌ಐಸಿ ಪ್ರಧಾನ ಕಚೇರಿಯ ಉನ್ನತ ಅಧಿಕಾರಿಗಳ ತಂಡವು ಭೇಟಿ ನೀಡಿ, ಅಲ್ಲಿ ಲಭ್ಯವಿರುವ ಸೌಲಭ್ಯ ಹಾಗೂ ಸಮಸ್ಯೆಗಳ ಬಗ್ಗೆ ಗಮನಾರ್ಹವಾದ ಪರಿಶೀಲನೆಯನ್ನು ನಡೆಸಿದೆ.
ಮಂಗಳೂರಿನ ಈ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ(ಇಎಸ್‌ಐ)ಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನರ ಪಾಲಿಗೆ ಪ್ರಮುಖವಾದ ಈ ಆಸ್ಪತ್ರೆಯ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಸದ ಕ್ಯಾ.ಚೌಟ ಅವರು ಹಲವು ತಿಂಗಳಿನಿಂದ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರು. ಮೊದಲು ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟು ಅಲ್ಲಿನ ವಾಸ್ತವ ಪರಿಸ್ಥಿತಿ ಹಾಗೂ ದಿನನಿತ್ಯ ಬರುವ ರೋಗಿಗಳು ಏನೆಲ್ಲ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದನ್ನು ಖುದ್ದು ಪರಿಶೀಲಿಸಿದ್ದರು.
ಬಳಿಕ, ಹೊಸದಿಲ್ಲಿಯಲ್ಲಿ ಇಎಸ್‌ಐಸಿ ಪ್ರಧಾನ ಕಚೇರಿಯ ಮಹಾ ನಿರ್ದೇಶಕ ಅಶೋಕ್ ಕುಮಾರ್ ಸಿಂಗ್ ಅವರನ್ನು ಕೂಡ ಭೇಟಿ ಮಾಡಿ ಮಂಗಳೂರಿನ ಇಎಸ್‌ಐ ಆಸ್ಪತ್ರೆ ಉನ್ನತಿಕರಣಕ್ಕೆ ಮನವಿ ಸಲ್ಲಿಸಿದ್ದರು. ಈ ನಡುವೆ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೂ ಮಂಗಳೂರಿನ ಇಎಸ್‌ಐ ಆಸ್ಪತ್ರೆಗಳ ಬಗ್ಗೆ ಮೂಲಸೌಕರ್ಯ ಸುಧಾರಣೆಗೆ, ವೈದ್ಯಕೀಯ ಉಪಕರಣಗಳ ಖರೀದಿಗೆ ಹಾಗೂ ನುರಿತ ತಜ್ಞ ವೈದ್ಯರ - ಸಿಬ್ಬಂದಿಗಳ ನೇಮಕಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ’ ರಾಜ್ಯ ಇಎಸ್‌ಐ ಸೊಸೈಟಿ ’ ರಚಿಸುವಂತೆ ಒತ್ತಾಯಿಸಿದ್ದರು.
ಇಎಸ್‌ಐಸಿ ಪ್ರಧಾನ ಕಚೇರಿಯ ಉಪ ವೈದ್ಯಕೀಯ ಆಯುಕ್ತೆ ಮೋನಾ ವರ್ಮ, ಇಎಸ್‌ಐಸಿ ದಕ್ಷಿಣ ವಲಯದ (ಐಸಿಟಿ ಅಡಿ) ವಿಮಾ ಆಯುಕ್ತ ಟಿ.ರೇಣುಕಾಪ್ರಸಾದ್ ಅವರನ್ನೊಳಗೊಂಡ ತಂಡವು ಇಎಸ್‌ಐ ಆಸ್ಪತ್ರೆಗೆ ಭೇಟಿ ಕೊಟ್ಟು ಇಲ್ಲಿನ ಸಮಸ್ಯೆ - ಸವಾಲುಗಳ ಬಗ್ಗೆ ಪರಿಶೀಲಿಸಿ, ಈ ಆಸ್ಪತ್ರೆ ಸುಧಾರಣೆಗೆ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಹಾಗೂ ಸಿಬ್ಬಂದಿಗಳ ಜತೆ ಸುದೀರ್ಘ ಸಮಲೋಚನೆ ನಡೆಸಿದ್ದಾರೆ.
ಮಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿರುವ ಪ್ರಯೋಗಾಲಯ, ವಾರ್ಡ್, ಶಸ್ತ್ರಚಿಕಿತ್ಸೆ ಕೊಠಡಿ, ಸಿಬ್ಬಂದಿಗಳ ಕ್ವಾಟರ್ಸ್ ಸೇರಿ ಆಸ್ಪತ್ರೆಯ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿಬ್ಬಂದಿ ಕೊರತೆ ಇರುವುದು ಕಂಡು ಬಂದಿದೆ. ಒಂದು ವೇಳೆ ರಾಜ್ಯ ಸರ್ಕಾರವು ಈ ಆಸ್ಪತ್ರೆಯ ನಿರ್ವಹಣೆಯನ್ನು ಇಎಸ್‌ಐಸಿ ಪ್ರಧಾನ ಕಚೇರಿಗೆ ಬಿಟ್ಟು ಕೊಟ್ಟರೆ ಇರುವ ಚೌಕಟ್ಟಿನೊಳಗೆ ಅದನ್ನು ಮತ್ತಷ್ಟು ಸುಧಾರಣೆಗಳೊಂದಿಗೆ ನಿಭಾಯಿಸಲು ಸಿದ್ದ ಎನ್ನುವ ಒಲವು ಇದೇ ವೇಳೆ ತಂಡ ವ್ಯಕ್ತಪಡಿಸಿದೆ. ವೈದ್ಯಕೀಯ ಅಧೀಕ್ಷಕ ಶೈಲಜಾ ಹಾಗೂ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿದ ತಂಡವು ಆಸ್ಪತ್ರೆ ಸಮಸ್ಯೆ-ಕೊರತೆ ಹಾಗೂ ಬೇಡಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಕ್ಯಾ.ಚೌಟ ಅವರು, ತಮ್ಮ ಮನವಿಗೆ ಸ್ಪಂದಿಸಿ ದಿಲ್ಲಿಯ ಇಎಸ್‌ಐಸಿ ಅಧಿಕಾರಿಗಳ ತಂಡವು ಮಂಗಳೂರಿನ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿರುವುದು ಬಹಳ ಖುಷಿ ತಂದಿದೆ. ಈ ತಂಡದ ಭೇಟಿಯ ಪರಿಣಾಮ, ಈ ಆಸ್ಪತ್ರೆಯಲ್ಲಿ ಚಿಕಿತ್ಸಾ ಗುಣಮಟ್ಟ ಹಾಗೂ ಮೂಲಸೌಕರ್ಯ ಹೆಚ್ಚಳವಾಗುವ ಬಗ್ಗೆ ಪೂರ್ಣ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ತಮ್ಮ ಪ್ರಾಮಾಣಿಕ ಪ್ರಯತ್ನಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.