ಮಂಗಳೂರು ಫುಟ್ಬಾಲ್ ಕ್ರೀಡಾಂಗಣ ಡಿಸೆಂಬರ್‌ನಲ್ಲಿ ಉದ್ಘಾಟನೆ : ಯು.ಟಿ.ಖಾದರ್

ಮಂಗಳೂರು, ನ.16: ನಗರದ ನೆಹರೂ ಮೈದಾನದ ಫುಟ್ಬಾಲ್ ಕ್ರೀಡಾಂಗಣದ ಕಾಮಗಾರಿಯನ್ನು ರವಿವಾರ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಪರಿಶೀಲಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಫುಟ್ಬಾಲ್ ಕ್ರೀಡಾಂಗಣವು ಈಗಾಗಲೇ ಆಸ್ಟ್ರೋ ಟರ್ಫ್ ಅಳವಡಿಸಲಾಗಿದೆ. ಇಂಟರ್ಲಾಕ್, ತಡೆಬೇಲಿ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್ ಅವರು, ಮಂಗಳೂರಿನಲ್ಲಿ ಫುಟ್ಬಾಲ್ ಆಟಕ್ಕೆ ಸುಸಜ್ಜಿತ ಟರ್ಫ್ ಕ್ರೀಡಾಂಗಣ ಬಹುತೇಕ ಸಿದ್ದವಾಗಿದೆ. ಶೇ 90ರಷ್ಟು ಕಾಮಗಾರಿ ಮುಗಿದಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಂಡು ಫುಟ್ಬಾಲ್ ಆಟಕ್ಕೆ ಕ್ರೀಡಾಂಗಣ ಲಭ್ಯವಾಗಲಿದೆ. ಡಿಸೆಂಬರ್ ಮೂರನೇ ವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿ ಈ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಂಗಳೂರಿನಲ್ಲಿ ಫುಟ್ಬಾಲ್ ಆಟಗಾರರಿಗೆ ಈ ಕ್ರೀಡಾಂಗಣದ ಮೂಲಕ ತರಬೇತಿಗೆ ಇನ್ನಷ್ಟು ಅವಕಾಶ ಲಭ್ಯವಾಗಲಿದೆ. ಈಗಾಗಲೇ ಇದೇ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದ ದ.ಕ. ಜಿಲ್ಲಾ ಅಂಡರ್-14 ಬಾಲಕರ ಫುಟ್ಬಾಲ್ ತಂಡ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮಿನಿ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿತ್ತು. ಪೆನಾಲ್ಟಿ ಶೂಟೌಟ್ ನಲ್ಲಿ ಬೆಳಗಾವಿ ತಂಡದ ಎದುರು ಸೋಲು ಅನುಭವಿಸಿತ್ತು. ಇದರೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ತಂಡದ 5 ಮಂದಿ ಆಟಗಾರರು ರಾಷ್ಟ್ರೀಯ ತಂಡದ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ ಎಂದು ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ನ ಅಧ್ಯಕ್ಷ ಡಿ.ಎಂ. ಅಸ್ಲಂ ತಿಳಿಸಿದ್ದಾರೆ.
ಸ್ಪೀಕರ್ ಯುಟಿ. ಖಾದರ್ ಅವರು ಕ್ರೀಡಾಂಗಣದ ಕಾಮಗಾರಿ ಪರಿಶೀಲನೆ ವೇಳೆ ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್, ದ.ಕ. ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಸಂತೋಷ್ ಶೆಟ್ಟಿ, ಮನಪಾ ಮಾಜಿ ಸದಸ್ಯರಾದ ಲತೀಫ್ ಕಂದಕ್, ಶಂಸುದ್ದೀನ್ ಬಂದರ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ್, ಮ್ಯಾನೇಜರ್ ಅರುಣ್ ಪ್ರಭಾ, ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ. ಅಸ್ಲಂ , ಕಾರ್ಯದರ್ಶಿ ಹುಸೈನ್ ಬೋಳಾರ್, ಕೋಶಾಧಿಕಾರಿ ಅಫ್ರೋಝ್ ಉಳ್ಳಾಲ, ಮ್ಯಾಂಗಳೂರು ಫುಟ್ಬಾಲ್ ಸ್ಪೋರ್ಟಂಗ್ ಕ್ಲಬ್ ನ ಅಧ್ಯಕ್ಷ ಫಯಾಝ್, ಕಾರ್ಯದರ್ಶಿ ಅಶ್ರಫ್ , ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ನ ಪ್ರಮುಖರಾದ ಅನಿಲ್ ಪಿ.ವಿ, ಭಾಸ್ಕರ ಬೆಂಗ್ರೆ, ವಿಜಯ ಸುವರ್ಣ, ಅಸ್ಪಾಕ್, ಕೋಚ್ ಅಜ್ಮಲ್ ಮತ್ತು ತಸ್ವರ್ ಉಪಸ್ಥಿತರಿದ್ದರು.







