ಮಂಗಳೂರು | ಮೇ 15, 16ರಂದು ಯೆನೆಪೋಯದಿಂದ ‘ಐಕಾನ್ ಯೂತ್- 2025’ ಯುವ ಸಮಾವೇಶ : ದೇಶ- ವಿದೇಶಗಳ ಪ್ರತಿನಿಧಿಗಳು ಭಾಗಿ

ಮಂಗಳೂರು : ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ಯೆನೆಪೋಯ ಡೀಮ್ಡ್ ವಿ.ವಿ. ಸಹಯೋಗದಲ್ಲಿ ‘ಐಕಾನ್ ಯೂತ್ 2025’ ಅಂತರರಾಷ್ಟ್ರೀಯ ಯುವ ಸಮಾವೇಶ ಮೇ 15 ಮತ್ತು 16 ರಂದು ಮಂಗಳೂರಿನ ಯೆನೆಪೋಯ ವಿವಿಯಲ್ಲಿ ಆಯೋಜಿಸಲಾಗಿದೆ.
ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಯೆನೆಪೋಯ ವೈದ್ಯಕೀಯ ಆಸ್ಪತ್ರೆಯ ಸಹಾಯಕ ಅಧೀಕ್ಷಕ ಡಾ. ನಾಗರಾಜ್ ಅವರು ಮಾತನಾಡಿ, ಈ ಸಮಾವೇಶದಲ್ಲಿ ಅಸ್ಸಾಂ, ರಾಜಸ್ಥಾನ, ಪಂಜಾಬ್, ಕೇರಳ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಗುಜರಾತ್, ಮಧ್ಯ ಪ್ರದೇಶ, ಪುದುಚೇರಿ, ಜಾರ್ಖಂಡ್, ಉತ್ತರಪ್ರದೇಶ, ಹೊಸದಿಲ್ಲಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳದಿಂದ ಹಾಗೂ ನೈಜೀರಿಯಾ, ನೇಪಾಳ ಮತ್ತು ಟಿಬೆಟ್ ದೇಶಗಳಿಂದ ಸುಮಾರು 650ಕ್ಕೂ ಹೆಚ್ಚು ಯುವ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಶ್ರೀಲಂಕಾ, ರಷ್ಯಾ, ನೈಜೀರಿಯಾ ಮತ್ತು ಥೈಲ್ಯಾಂಡ್‌ನಿಂದಲೂ ವಕ್ತಾರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವಿ.ವಿ. ಸಂಪರ್ಕ ವಿಸ್ತರಣೆ ವಿಭಾಗದ ಅಧ್ಯಕ್ಷೆ ಡಾ.ಅಶ್ವಿನಿ ಶೆಟ್ಟಿ ಮಾತನಾಡಿ, ಮೇ 15 ರಂದು ಬೆಳಗ್ಗೆ 10 ಗಂಟೆಗೆ ಯೆನೆಪೋಯಾ ಯೆಂಡುರೆನ್ಸ್ ರೆನ್‌ನಲ್ಲಿ ಉದ್ಘಾಟನೆ ನಡೆಯಲಿದೆ. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ನಿರ್ದೇಶಕ ಡಾ.ಸರ್ಹಾ ಜಯಲ್ ಸಾವಿ ಉದ್ಘಾಟಿಸಲಿದ್ದಾರೆ. ಯೆನೆಪೋಯಾ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ವಿಜಯಕುಮಾರ್ ಅವರು ಉಪನ್ಯಾಸ ನೀಡಲಿದ್ದಾರೆ. ಯೆನೆಪೋಯಾ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಯೆನೆಪೋಯಾ ಅಬ್ದುಲಾ ಕುಂಞಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ವಿ.ವಿ. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮುಹಮ್ಮದ್ ಗುತ್ತಿಗಾರ್ ಅವರು ಮಾತನಾಡಿ, ‘ಇನ್ವೆನ್ಷನಿಂಗ್ ಇಂಡಿಯಾಸ್ ಫ್ಯೂಚರ್: ಯೂತ್ ಆ್ಯಸ್ ಚೇಂಜ್‌ಮೇಕರ್’ ಎಂದು ಪರಿಕಲ್ಪನೆಯಲ್ಲಿ 145 ವಿದ್ಯಾರ್ಥಿಗಳು ತಮ್ಮ ವಿನೂತನ ಕಲ್ಪನೆಗಳನ್ನು ಪೋಸ್ಟರ್ ಪ್ರದರ್ಶನಗೊಳಿಸಲಿದ್ದು, ಯುವ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಸಮಾಜಮುಖಿ ಆವಿಷ್ಕಾರಗಳಿಗೆ ಸ್ಪರ್ಧೆ ವೇದಿಕೆಯಾಗಲಿದೆ. ದೇಶಿ ಹಾಗೂ ಅಂತರರಾಷ್ಟ್ರೀಯ 18 ವಕ್ತಾರರು ಮತ್ತು 4 ಸಮನ್ವಯಕಾರರು ಪಾಲ್ಗೊಳ್ಳಲಿದ್ದಾರೆ. ಮೇ 16 ರಂದು ಸಮಾರೋಪ ನಡೆಯಲಿದ್ದು, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಣದೀಪ್ ಡಿ., ರಾಜ್ಯ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ ಆರ್., ಭಾರತೀಯ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಕಾರ್ಯಕ್ರಮ ಸಲಹೆಗಾರ ಸೆಲ್ವನ್, ಪ್ರಮುಖರಾದ ಡಾ.ಪ್ರತಾಪ್ ಲಿಂಗಯ್ಯ, ಕಾರ್ತಿಕೇಯನ್, ಮಧೀಶ್ ಪರಿಖ್ ಭಾಗವಹಿಸಲಿದ್ದಾರೆ. ಕುಲಪತಿ ಡಾ.ಎಂ.ವಿಜಯಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.







