ಮಂಗಳೂರು | ಡಿ.1ರಂದು ನವೀಕೃತ ಇಲೆಕ್ಟ್ರಾನಿಕ್ ಶೂಟಿಂಗ್ ರೇಂಜ್ ಉದ್ಘಾಟನೆ

ಮಂಗಳೂರು, ನ. 25: ನಗರದ ರೈಫಲ್ ಕ್ಲಬ್‌ನಿಂದ ನೂತನವಾಗಿ ನವೀಕರಿಸಲ್ಪಟ್ಟ 7 ಲೇನ್‌ನ ಸಂಪೂರ್ಣ ಇಲೆಕ್ಟ್ರಾನಿಕ್ ಶೂಟಿಂಗ್ ರೇಂಜ್ ಡಿ.1ರಂದು ಉದ್ಘಾಟನೆಗೊಳ್ಳಲಿದೆ.
ನವೀಕೃತ ಶೂಟಿಂಗ್ ರೇಜ್‌ನ ಉದ್ಘಾಟನೆಯನ್ನು ಡಿ. 1ರಂದು ಜುಗುಲ್ ಟವರ್ಸ್‌ನ 4ನೆಮಹಡಿಯಲ್ಲಿರುವ ಮಂಗಳೂರು ರೈಫಲ್ ಕ್ಲಬ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಸ್ಪೀಕರ್ ಯು.ಟಿ.ಖಾದರ್ ನೆರವೇರಿಸಲಿದ್ದಾರೆ.
ಎಂಆರ್‌ಸಿಯಿಂದ ತರಬೇತಿ ಪಡೆದ ಮೂವರು ಕ್ರೀಡಾಪಟುಗಳು ಭಾರತೀಯ ರಾಷ್ಟ್ರೀಯ ತಂಡದ ಆಯ್ಕೆ ಪರೀಕ್ಷೆಗಳಿಗೆ ಈಗಾಗಲೇ ಅರ್ಹತೆ ಪಡೆದಿದ್ದಾರೆ.
ಕರಾವಳಿ ಕರ್ನಾಟಕದ ಏಕೈಕ 10 ಮೀಟರ್ ಏರ್ ರೈಫಲ್ ಮತ್ತು ಏರ್ ಪಿಸ್ತೂಲ್ ಶೂಟಿಂಗ್ ಅಕಾಡೆಮಿಯಾಗಿರುವ ಮಂಗಳೂರು ರೈಫಲ್ ಕ್ಲಬ್ (ಎಂಆರ್‌ಸಿ) ಒಲಿಂಪಿಕ್ ಶೂಟಿಂಗ್ ಕೀಡೆಗಳಿಗೆ ಸ್ಥಳೀಯ ಪ್ರತಿಭೆಗಳಿಗೆ ತರಬೇತು ನೀಡುವ ಕಾರ್ಯವನ್ನು ನಡೆಸುತ್ತಿದೆ.
2017ರಲ್ಲಿ ಸ್ಥಾಪನೆಗೊಂಡ ಎಂಆರ್‌ಸಿ ಯುವ ಶೂಟರ್‌ಗಳನ್ನು ರೂಪಿಸುವ ಜತೆಗೆ ಕರಾವಳಿ ಪ್ರದೇಶದ ಕೀಡಾಸಕ್ತರಿಗೆ ಸುರಕ್ಷಿತ, ಸಂಯೋಜಿತ ಮತ್ತು ವೃತ್ತಿಪರ ತರಬೇತಿಯನ್ನು ನೀಡುತ್ತಿದೆ. ಸಂಸ್ಥೆಯ ಹೊಸ 7 ಲೇನ್ ಸಂಪೂರ್ಣ ಇಲೆಕ್ಟ್ರಾನಿಕ್ ಶೂಟಿಂಗ್ ರೇಜ್ ಮಹತ್ವದ ಮೈಲಿಗಲ್ಲಾಗಿದೆ. ಸ್ಥಳೀಯ ಶೂಟರ್ ಪ್ರತಿಭೆಗಳಿಗೆ ಉನ್ನತ ಮಟ್ಟದ ತರಬೇತಿಯು ಇಲ್ಲಿ ಸಿಗಲಿದೆ.
2018ರಲ್ಲಿ ರಾಜ್ಯ ಮಟ್ಟದ ಓಪನ್ ಸೈಟ್ ವೈಯಕ್ತಿಕ ಚಾಂಪಿಯನ್‌ಶಿಪ್‌ನಲ್ಲಿ 3 ಚಿನ್ನದ ಪದಕಗಳು, 2018 ಹಾಗೂ 19ರಲ್ಲಿ ತಂಡ ಕಂಚಿನ ಪದಕ, ಮಹಿಳೆಯರ ಮಾಸ್ಟರ್ಸ್ ವಿಭಾಗದಲ್ಲಿ 2023-24ರಲ್ಲಿ 2 ಕಂಚಿನ ಪದಕಗಳು ಎಂಆರ್‌ಸಿಯ ಪ್ರತಿಭೆಗಳಿಗೆ ಲಭ್ಯವಾಗಿವೆ.
2024ರ ಅಖಿಲ ಭಾರತ ಜಿ.ವಿ. ಮಾವಲಂಕರ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ವಿಭಾಗದಲ್ಲಿ ಬೆಳ್ಳಿ, 2025ರ ದಕ್ಷಿಣ ವಲಯ ಮಾಸ್ಟರ್ಸ್ ಕೆಟಗರಿಯಲ್ಲಿ ಬೆಳ್ಳಿ ಪದಕ, 2021ರಲ್ಲಿ ದಕ್ಷಿಣ ವಲಯ ಸಿಬಿಎಸ್‌ಇ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಪದಕಗಳನ್ನು ಪಡೆದ ಹೆಮ್ಮೆ ಎಂಆರ್‌ಸಿಯದ್ದು ಎಂದು ಸಂಸ್ಥೆಯ ಮುಖ್ಯ ತರಬೇತುದಾರ ಮುಕೇಶ್ ಕುಮಾರ್ ತಿಳಿಸಿದ್ದಾರೆ.







