ಮಂಗಳೂರು | ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಮೇಶ್ ಪಂಬದ, ಸಿಂಧೂ ಗುಜರನ್‌ಗೆ ಸನ್ಮಾನ

ಮಂಗಳೂರು, ನ.22: ಉಮೇಶ್ ಪಂಬದ ಸಮ್ಮಾನ ಸಮಿತಿ ಮಂಗಳೂರು, ದಿ.ಜಾರಪ್ಪ ಪಂಬದ ಸಂಸ್ಮರಣ ಸಮಿತಿ ಮತ್ತು ಯೆಯ್ಯಾಡಿ ಒಳಗುಡ್ಡೆ ಶ್ರೀಅರಸು ಧರ್ಮ ಜಾರಂದಾಯ ಬಂಟ ಮತ್ತು ವಾರಾಹಿ ದೈವಸ್ಥಾನ ವತಿಯಿಂದ ಉರ್ವಸ್ಟೋರ್‌ನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಮೇಶ್ ಪಂಬದ ಮತ್ತು ಸಿಂಧೂ ಗುಜರನ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ, ನಿರ್ದೇಶಕ ರಿಷಭ್ ಶೆಟ್ಟಿ ಮಾತನಾಡಿ, ಉಮೇಶ್ ಪಂಬದ ಅವರು ತನ್ನ ಜೀವನನ್ನು ದೈವಕ್ಕೆ, ದೈವಾರಾಧನೆಗೆ, ದೈವ ನರ್ತನಕ್ಕೆ ಮುಡಿಪಾಗಿಟ್ಟು ಸೇವೆ ಸಲ್ಲಿಸಿದ್ದಾರೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಪಂಬದ ಸಮುದಾಯವೂ ಸೇರಿದಂತೆ ದೈವದ ಚಾಕರಿ ಮಾಡುವ ಹದಿನಾರು ವರ್ಗಕ್ಕೆ ಸಂದ ಗೌರವ. ದೈವ ನರ್ತಕರು, ದೈವ ಚಾಕರಿ ಮಾಡುವ ಸಮುದಾಯವನ್ನು ಗುರುತಿಸಿ ಸರಕಾರ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದರು.
ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ದೈವಾರಾಧನೆಯಲ್ಲಿ ಹಿರಿಮೆ ಮತ್ತು ಗರಿಮೆಗೆ ಪಾತ್ರರಾಗಿರುವ ಉಮೇಶ ಪಂಬದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದರಿಂದ ಪ್ರಶಸ್ತಿಗೆ ಹೆಚ್ಚಿನ ಗೌರವ ಬಂದಿದೆ ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್ ಉಳೆಪಾಡಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಬಂಟರ ಯಾನೇ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಉದ್ಯಮಿ ಗಿರಿಧರ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ಅಗರಿ ಸಂಸ್ಥೆಯ ಮಾಲಕ ಅಗರಿ ರಾಘವೇಂದ್ರ ರಾವ್, ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ಡಾ.ರವೀಶ್ ಪಡುಮಲೆ, ಕೆಎಂಸಿ ಮಂಗಳೂರು ಮಹಾ ಪ್ರಬಂಧಕ ರವಿರಾಜ್ ಕೆ., ನಲಿಕೆ ಸಮುದಾಯದ ಅಧ್ಯಕ್ಷ ಪಾಂಡುರಂಗ ಉಡುಪಿ, ಪಂಬದ ಸಂಘದ ಮಹಾಬಲ ಗಂಧಕಾಡು, ಪ್ರಮುಖರಾದ ಅಶೋಕ್ ಚೌಟ, ಲೀಲಾಕ್ಷ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು. ಸಮ್ಮಾನ ಸಮಿತಿ ಅಧ್ಯಕ್ಷ ವಕೀಲ್ ರವಿ ಪ್ರಸನ್ನ ಸಿ.ಕೆ. ಅಧ್ಯಕ್ಷತೆ ವಹಿಸಿದ್ದರು.
ವೇ.ಮೂ.ಕುಡುಪು ನರಸಿಂಹ ತಂತ್ರಿ, ಪಟೇಲ್ ಶಂಕರ ರೈ, ಸದಾನಂದ ಮೊಯ್ಲಿ ಎಕ್ಕಾರು, ಪ್ರಮುಖರಾದ ವಿಮಲಾ ಬಂಗೇರ, ಮೋಹಿನಿ ಬಂಗೇರ, ಪೂವಮ್ಮ ಬಂಗೇರ, ನಳಿನಿ ಬಂಗೇರ ಅವರನ್ನು ಸನ್ಮಾನಿಸಲಾಯಿತು. ತುಳುನಾಡಿನ ಜನಪದ ಕಲಾವಿದರನ್ನೂ ಇದೇ ವೇಳೆ ಸಮ್ಮಾನಿಸಲಾಯಿತು. ಶಾರದಾ ವಿದ್ಯಾಲಯದ ಪ್ರಿನ್ಸಿಪಾಲ್ ದಯಾನಂದ ಕಟೀಲು ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಶಿಕ್ಷಣ ಇಲಾಖೆ ವಿಶೇಷ ಅಧಿಕಾರಿ ದೇವಿ ಪ್ರಸಾದ್ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.







