ಮಂಗಳೂರು: ಮಣಿಪುರ ಹಿಂಸಾಚಾರ ಖಂಡಿಸಿ ಸಮಾನ ಮನಸ್ಕ ನಾಗರಿಕರ ಪ್ರತಿಭಟನೆ

ಮಂಗಳೂರು, ಜು.21: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಮತ್ತು ಮಹಿಳೆಯರಿಗೆ ಘನತೆಯ ಬದುಕನ್ನು ಖಾತ್ರಿಗೊಳಿಸಬೇಕು ಎಂದು ಆಗ್ರಹಿಸಿ ‘ಸಮಾನ ಮನಸ್ಕ ನಾಗರಿಕರು’ ಶುಕ್ರವಾರ ನಗರದ ಕ್ಲಾಕ್ ಟವರ್ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ವಿಮುಕ್ತಿ ಟ್ರಸ್ಟ್‌ನ ಫಾ.ವಿನೋದ್ ‘ಮಣಿಪುರದಲ್ಲಿ ನಡೆಯುತ್ತಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯ ಕೃತ್ಯ ವಾಗಿದೆ. ಇಲ್ಲಿನ ಪೈಶಾಚಿಕ ಕೃತ್ಯದಿಂದ ಮಣಿಪುರ ಸರಕಾರದ್ದು ಮಾತ್ರವಲ್ಲ, ದೇಶದ ಮರ್ಯಾದೆಯೇ ಹೋಗಿದೆ. ಅಲ್ಲಿ ಆಡಳಿತ ವ್ಯವಸ್ಥೆ ಇದೆಯೋ, ಇಲ್ಲವೋ ಎಂಬ ಸಂಶಯ ವ್ಯಕ್ತವಾಗುತ್ತಿದೆ’ ಎಂದರು.
ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಸಬೀಹಾ ಭೂಮಿಗೌಡ ಮಾತನಾಡಿ ‘ಇದು ಮಹಿಳಾ ಸಮಾಜದ ಮೇಲಿನ ಪ್ರಹಾರ ವಾಗಿದೆ. ಇದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಪ್ರಧಾನಿ, ಗೃಹ ಸಚಿವರ ಸಹಿತ ಆಡಳಿತ ವ್ಯವಸ್ಥೆಯು ಕೃತ್ಯ ನಡೆದು ಎರಡು ವಾರವಾದರೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಸರಕಾರದ ಮೌನವು ಲಜ್ಜೆಗೇಡಿತನವಾಗಿದೆ’ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಹಿಳಾ ವಿರೋಧಿ ಒಕ್ಕೂಟದ ನಾಯಕಿ ವಾಣಿ ಪೆರಿಯೋಡಿ ‘ದೇಶದಲ್ಲಿ ಪ್ರತಿ ಕ್ಷಣವೂ ಮಹಿಳೆಯರು ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದಾರೆ. ಮಣಿಪುರದ ಮಹಿಳೆಯರ ಸಂಕಟವು ನಮ್ಮದೇ ಸಂಕಟವಾಗಿದೆ. ಅದು ಕೇವಲ ಅವರ ನೋವಲ್ಲ, ನಮ್ಮ ನೋವೂ ಆಗಿದೆ. ಹಾಗಾಗಿ ದೌರ್ಜನ್ಯಕ್ಕೀಡಾದ ಮಹಿಳೆಯರ ಪರ ನಾವೆಲ್ಲಾ ನಿಲ್ಲಬೇಕಿದೆ’ ಎಂದರು.
ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ದ.ಕ. ಜಿಲ್ಲಾಧ್ಯಕ್ಷ ಸಾಜಿದಾ ಮೂಮಿನ್, ಆಪ್ ಮುಖಂಡ ರಾಜೇಂದ್ರ ಕುಮಾರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ನ್ಯಾಯವಾದಿ ಸರ್ಫ್ರರಾಝ್, ಈಶಾನ್ಯ ರಾಜ್ಯದ ವಿದ್ಯಾರ್ಥಿನಿ ಟಿರ್ನಾಕರು, ಜಿಐಒ ದ.ಕ.ಜಿಲ್ಲಾ ನಾಯಕಿ ಡಾ.ಫಿದಾ, ಯುವ ಮುನ್ನಡೆ ಮಂಗಳೂರು ಇದರ ಮುಖಂಡ ಮುಹಮ್ಮದ್ ನಿಸಾರ್, ನಿವೃತ್ತ ಪ್ರಾಧ್ಯಾಪಕ ಡಾ. ಭೂಮಿಗೌಡ ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತರಾದ ವಿದ್ಯಾ ದಿನಕರ್, ಶಬ್ಬೀರ್ ಅಹ್ಮದ್ ಮತ್ತಿತರರು ಪಾಲ್ಗೊಂಡಿದ್ದರು.