ಮಂಗಳೂರು: ದಲಿತ ಬಾಲಕಿಯ ಅತ್ಯಾಚಾರ ಖಂಡಿಸಿ ಪ್ರತಿಭಟನಾ ಸಭೆ

ಮಂಗಳೂರು : ವಿಟ್ಲದಲ್ಲಿ ದಲಿತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ)ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಸೋಮವಾರ ನಡೆಯಿತು.
ಮಂಗಳೂರಿನ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್, ಧರ್ಮ ಹಾಗೂ ಸ್ತ್ರೀ ರಕ್ಷಣೆ ಎಂದು ಹೇಳಿಕೊಳ್ಳುವ ಸಂಘ ಪರಿವಾರದ ಕೆಲ ದುರುಳರು ದೇಶಭಕ್ತಿಯ ಸೋಗಿನಲ್ಲಿ ಅಮಾಯಕ ಹೆಣ್ಣು ಮಕ್ಕಳ ಮಾನಹರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತ ಬಾಲಕಿಯ ಅತ್ಯಾಚಾರವೆಸಗಿದ ಆರೋಪಿಗಳಿಗೆ ಪೊಲೀಸ್ ಇಲಾಖೆ ಹಾಗೂ ಸರಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಬೇಟಿ ಬಚಾವೊ, ಬೇಟಿ ಪಡಾವೊ ಎಂದು ಹೇಳುತ್ತಿದ್ದಾರೆ. ಆದರೆ ಇಡೀ ದೇಶದಲ್ಲಿ ಅವರ ಪಕ್ಷ ಹಾಗೂ ಸಂಘ ಪರಿವಾರದ ಕೆಲ ಕಾರ್ಯಕರ್ತರು ದೇಶಭಕ್ತಿಯ ನಕಲಿ ಸೋಗಿನಲ್ಲಿ ಅಮಾಯ ಹೆಣ್ಣು ಮಕ್ಕಳ ಮಾನಹರಣ, ತೇಜೋವಧೆ, ಅತ್ಯಾಚಾರ ಮೊದಲಾದ ಗಂಭೀರ ಪ್ರಕರಣಗಳಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ಮಣಿಪುರ, ಹರಿಯಾಣ ಮೊದಲಾದ ಕಡೆ ಜನಾಂಗೀಯ ಕೋಮು ಹಿಂಸೆಗಳನ್ನು ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿ ದ್ದಾರೆ ಎಂದು ಅವರು ಆರೋಪಿಸಿದರು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅನ್ಯ ಸಮುದಾಯವರು ಯಾವುದೇ ಕೃತ್ಯ ನಡೆಸಿದರೂ ಅವರನ್ನು ಉಗ್ರವಾದಿಗಳು, ಜಿಹಾದಿಗಳೆಂದು ಬಿಜೆಪಿ ಹಾಗೂ ಸಂಘ ಪರಿವಾರದವರು ಬೊಬ್ಬಿಡುತ್ತಾರೆ. ಆದರೆ, ವಿಟ್ಲದಲ್ಲಿ ದಲಿತ ಬಾಲಕಿಯನ್ನು ತಮ್ಮದೇ ಪರಿವಾರದವರು ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣದ ಬಗ್ಗೆ ತಮಗೆ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ಅವರ ದ್ವಿಮುಖ ನೀತಿಯನ್ನು ಪ್ರದರ್ಶಿಸಿದೆ ಎಂದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ. ಉಮೇಶ್ಚಂದ್ರ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ದಸಂಸನ ಜಿಲ್ಲಾ ಸಂಚಾಲಕರಾದ ರಘು ಕೆ. ಎಕ್ಕಾರು, ದ.ಕ. ಜಿಲ್ಲಾ ಸಮನ್ವಯ ಸಮಿತಿಯ ಕಾರ್ಯದರ್ಶಿ ಅಶೋಕ ಕೊಂಚಾಡಿ, ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಸಂಘಟನಾ ಸಂಚಾಲಕಿ ಕಲಾವತಿ ಕೋಟೆಕಾರ್ ಮೊದಲಾದವರು ಮಾತನಾಡಿದರು.
ಸಭೆಯ ಆರಂಭದಲ್ಲಿ ರವಿವಾರ ನಿಧನರಾದ ತೆಲಂಗಾಣದ ಸಾಂಸ್ಕೃತಿಕ ಕವಿ, ಕ್ರಾಂತಿಕಾರಿ ಹಾಡುಗಾರ ಗದ್ದರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ದಲಿತ ಕಲಾ ಮಂಡಳಿ ಸಂಚಾಲಕರಾದ ಸಂಕಪ್ಪ ಕಾಂಚನ್ ಹಾಗೂ ಸಂಗಡಿಗರು ಕ್ರಾಂತಿಗೀತೆ ಹಾಡಿದರು.
ಅಹಿಂದ ಜಿಲ್ಲಾ ಅಧ್ಯಕ್ಷರಾದ ಪದ್ಮನಾಭ ನರಿಂಗಾನ, ನಿಸಾರ್, ರುಕ್ಕಯ್ಯ ಕರಂಬಾರು, ರವಿ ಪೇಜಾವರ, ಸುರೇಶ್ ಬೆಳ್ಳಾಯೂರ್, ದೊಂಬಯ್ಯ ಕಟೀಲು, ಮಂಜಪ್ಪ ಪುತ್ರನ್, ಸುಧಾಕರ ಬೋಳೂರು, ಗಣೇಶ್ ಸೂಟರ್‌ಪೇಟೆ, ಲಕ್ಷ್ಮಣ್ ಕಾಂಚನ್, ನಾಗೇಶ ಚಿಲಿಂಬಿ, ಬಾಬ ಕುಂದರ್, ಗೀತಾ ಕರಂಬಾರು, ಲಿಂಗಪ್ಪ ಕುಂದರ್ ಮೊದಲಾದವರು ಭಾಗವಹಿಸಿದ್ದರು.







