ಮಂಗಳೂರು: ರೋಟರಿ 25ನೇ ವಾರ್ಷಿಕ ಚಿಣ್ಣರ ಉತ್ಸವ

ಮಂಗಳೂರು ನ. 30: ಮಕ್ಕಳ ಸೇವೆ ದೇವರ ಸೇವೆಗೆ ಸಮಾನ. ಪ್ರೀತಿ ವಾತ್ಸಲ್ಯದಿಂದ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡುವ ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವ ಪ್ರಶಂಸನೀಯ ಎಂದು ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಡಾ.ಗುರುಕಿರಣ್ ಹೇಳಿದ್ದಾರೆ.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ನಗರದ ಕೆನರಾ ಹೈಸ್ಕೂಲ್ ಉರ್ವ ಪ್ರಾಂಗಣದಲ್ಲಿ ರವಿವಾರ ಆಯೋಜಿಸಿದ್ದ ‘ಚಿಣ್ಣರ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿಡುತ್ತಿದ್ದರು.
ಬಳಿಕ ಆಪ್ತಮಿತ್ರ ಚಲನಚಿತ್ರದ ‘ಕಾಲವನ್ನು ತಡೆಯೋರು ಯಾರೂ ಇಲ್ಲ’ ಹಾಡನ್ನು ಹಾಡಿ ಮಕ್ಕಳನ್ನು ರಂಜಿಸಿದರು.
ನಗರದ 10 ಮಕ್ಕಳ ರಕ್ಷಣೆ ಮತ್ತು ಆರೈಕೆ ಕೇಂದ್ರದ ಸುಮಾರು 430 ಮಕ್ಕಳು ಉತ್ಸವದಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆ, ಆಟಗಳಲ್ಲಿ ಭಾಗವಹಿಸಿದರು.
ಸಂಘಟನಾ ಅಧ್ಯಕ್ಷ ಡಾ. ದೇವದಾಸ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ವೇದಿಕೆಯನ್ನು ಒದಗಿಸಿ ಅವರ ಉತ್ಸಾಹಕ್ಕೆ ಸ್ಪಂದಿಸಿ, ಪ್ರೋತ್ಸಾಹಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುವುದು ಹಾಗೂ ಮಕ್ಕಳಲಿಲ ಉತ್ಸಾಹ, ಸಂತಸ ಹೊರಹೊಮ್ಮಿಸುವುದು ನಮ್ಮ ಸಂಸ್ಥೆಯ ಮುಖ್ಯ ಧ್ಯೇಯ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ರೈ ಸ್ವಾಗತಿಸಿದರು. ಜಿಲ್ಲಾ ರೋಟರಿ ವಲಯ ಸಹಾಯಕ ಗವರ್ನರ್ ಚಿನ್ನಗಿರಿ ಗೌಡ ಮತ್ತು ವಲಯ ಪ್ರತಿನಿಧಿ ರವಿ ಜಲನ್ ಗೌರವ ಅತಿಥಿಯಾಗಿ ಭಾಗವಹಿಸಿದರು.
ರೋಟರಾಕ್ಟ್ ಸಂಸ್ಥೆಯ ಅಧ್ಯಕ್ಷ ಅಕ್ಷಯ್ ರೈ, ಕಾರ್ಯದರ್ಶಿ ವಿವೇಕ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ವಿಕಾಸ್ ಕೊಟ್ಯಾನ್ ವಂದಿಸಿದರು. ಕೆ.ಎಂ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾ ಚುನಾಯಿತ ಗವರ್ನರ್ ಸತೀಶ್ ಬೋಳಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪ್ರದಾನ ಮಾಡಿದರು.







