ಮಂಗಳೂರು: ಇ- ಆಟೋರಿಕ್ಷಾ ಪರವಾನಿಗೆ ಪಡೆಯಲು ಆರ್‌ಟಿಒ ಸೂಚನೆ

ಮಂಗಳೂರು : ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದ ಆದೇಶದಂತೆ ಮಂಗಳೂರು ನಗರದಲ್ಲಿ ವಾಹನ ಸಂಚಾರದಟ್ಟಣೆ ನಿಯಂತ್ರಿಸುವ ಬಗ್ಗೆ ನಿಬಂಧನೆಗಳನ್ನು ವಿಧಿಸಿ ಪರವಾನಿಗೆಯನ್ನು ವಿತರಿಸಲು ದ.ಕ. ಜಿಲ್ಲಾಧಿಕಾರಿಗಳು ನಿರ್ಧರಿಸಿದ್ದಾರೆ. ಅದರಂತೆ 2022ರ ಜನವರಿ 20ರಿಂದ 2025ರ ಅಕ್ಟೋಬರ್ 30ರವರೆಗೆ ಬ್ಯಾಟರಿ ಚಾಲಿತ ಇಂಧನ ಬಳಸಿ ರಹದಾರಿ ಪಡೆಯದೆ ನೊಂದಣಿಯಾಗಿರುವ ಹಾಗೂ ವಲಯ-1ರ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಆಟೋರಿಕ್ಷಾಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ, ಪ್ರಾಧಿಕಾರದ ನಿಬಂಧನೆಗಳಿಗೆ ಒಳಪಟ್ಟು ಪರವಾನಿಗೆಯನ್ನು ಪಡೆದುಕೊಳ್ಳಬೇಕು.
ವಲಯ 1ರ ವ್ಯಾಪ್ತಿಗೆ ಬರುವ ಪರವಾನಿಗೆದಾರರು ಇ-ಆಟೋರಿಕ್ಷಾಗಳಿಗೆ ಆಕಾಶ ನೀಲಿ ಬಣ್ಣದ ಚೌಕಾರಾರದಲ್ಲಿ ಬಣ್ಣವನ್ನು ಬಳಿದು, ಪೊಲೀಸ್ ಇಲಾಖೆಯಿಂದ ಗುರುತಿನ ಸಂಖ್ಯೆ ಪಡೆಯಬೇಕು.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕನಿಷ್ಟ 5 ವಷರ್ ನಿವಾಸಿಯಾಗಿರುವ ಬಗ್ಗೆ ವಾಸಸ್ಥಳದ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸಬೇಕು. ಈಗಾಗಲೇ ಮಂಗಳೂರು ನಗರ ವ್ಯಾಪ್ತಿಯಲ್ಲಿ ಆಟೋರಿಕ್ಷಾ ಪರವಾನಿಗೆ ಹೊಂದಿರು ವವರಿಗೆ ಇ-ಆಟೋರಿಕ್ಷಾ ಪರವಾನಿಗೆಯನ್ನು ಮಂಜೂರು ಮಾಡಲಾಗುವುದಿಲ್ಲ. ಒಬ್ಬರಿಗೆ ಒಂದೇ ಇ-ಆಟೋರಿಕ್ಷಾ ಪರವಾನಿಗೆಯನ್ನು ಮಂಜೂರು ಮಾಡಲಾಗುತ್ತದೆ. ಇ-ಆಟೋರಿಕ್ಷಾ ಪರವಾನಿಗೆಯನ್ನು ಪಡೆದುಕೊಂಡವರು ಕಡ್ಡಾಯವಾಗಿ ಆಟೋರಿಕ್ಷಾ ಚಾಲನೆ ಮಾಡುವ ಚಾಲನಾ ಪರವಾನಿಗೆ/ಬ್ಯಾಡ್ಜ್ ಹೊಂದಿರಬೇಕು ಹಾಗೂ ಕಡ್ಡಾಯ ವಾಗಿ ಪರವಾನಿಗೆದಾರನೆ ಆಟೋರಿಕ್ಷಾವನ್ನು ಚಾಲನೆ ಮಾಡಬೇಕು. ಕಾನೂನಾತ್ಮಕ ಹಾಗೂ ಆಡಳಿತದ ದೃಷ್ಟಿಯಿಂದ ಪ್ರಾಧಿಕಾರಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ತಕ್ಷಣ ಪರವಾನಿಗೆಯನ್ನು ಪಡೆದುಕೊಳ್ಳುವಂತೆ ಉಪ ಸಾರಿಗೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







