ಮಂಗಳೂರು| ಮಹಾವೀರ ವೃತ್ತದಲ್ಲಿ ಮರುಸ್ಥಾಪನೆಗೊಂಡ ಕಲಶ ಲೋಕಾರ್ಪಣೆ

ಮಂಗಳೂರು: ನಗರದ ಪಂಪ್‌ವೆಲ್ ಮಹಾವೀರ ವೃತ್ತದಲ್ಲಿ ಮಂಗಳೂರು ಜೈನ್ ಸೊಸೈಟಿ (ರಿ) ಇವರ ಮುಂದಾಳತ್ವ ದಲ್ಲಿ ಮರುಸ್ಥಾಪನೆಗೊಂಡ ಕಲಶವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಶನಿವಾರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾನವನ ಅಂತರಂಗ-ಬಹಿರಂಗ ಶುದ್ಧವಾಗಬೇಕು. ಮಂಗಳೂರಿಗೆ ಆಗಮಿಸುವ ಹಾಗೂ ತೆರಳುವವರಿಗೆ ವಿದಾಯ ಹಾಗೂ ಸ್ವಾಗತ ಕೋರುವ ಕಲಶವಾಗಿದೆ. ಎಲ್ಲರಿಗೂ ಶುಭವಾಗಲಿ ಎಂಬ ಆಶಯದಲ್ಲಿ ಈ ಪವಿತ್ರ ಕಲಶವನ್ನು ಸ್ಥಾಪಿಸಲಾಗಿದೆ ಎಂದರು.
*ಸ್ವಾಭಿಮಾನದ ಸಂಕೇತ : ಯುಟಿ ಖಾದರ್ ನಾಮಫಲಕ ಅನಾವರಣಗೊಳಿಸಿದ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಈ ಕಲಶ ಕರಾವಳಿಯ ಸಂಸ್ಕೃತಿ ಪರಂಪರೆ, ಧಾರ್ಮಿಕತೆ, ಸ್ವಾಭಿಮಾನದ ಸಂಕೇತ. ಮಹಾವೀರರ ಅಹಿಂಸಾ ಪರಮೋಧರ್ಮದ ಸಂದೇಶವನ್ನು ಸಾರುವ ಕಲಶ ಇದಾಗಿದ್ದು, ಅವರ ಚಿಂತನಾ ವಾಕ್ಯಗಳನ್ನೂ ಫಲಕಗಳಲ್ಲಿ ಅಳವಡಿಸಬೇಕು. ಈ ಮೂಲಕ ಜನತೆ ಆತ್ಮಾವಲೋಕನ ನಡೆಸಲು ನಾಂದಿಯಾಗಬೇಕು ಎಂದರು.
ದ.ಕ. ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಮಂಗಳೂರು 2.0 ಅಭಿವೃದ್ಧಿಗೆ ಈ ಕಲಶ ಕಲಶಪ್ರಾಯವಾಗಿದೆ. ‘ಮರಳಿ ಊರಿಗೆ’ ಕಲ್ಪನೆಯಡಿ ಸ್ವಂತ ಊರಿನಲ್ಲಿ ಉದ್ಯೋಗ ಕೈಗೊಳ್ಳುವವರಿಗೆ ಇದು ಪ್ರೇರಣೆಯಾಗಬೇಕು ಎಂದರು.
ಬಿ.ಸಿ.ರೋಡ್-ಸುರತ್ಕಲ್ ಹೆದ್ದಾರಿಯ ಉನ್ನತೀಕರಣಕ್ಕೆ ಕಾರ್ಯಸಾಧ್ಯತಾ ವರದಿಗೆ ಕೇಂದ್ರ ಸೂಚಿಸಿದೆ. ಕುದುರೆಮುಖ ಕಾರ್ಖಾನೆಯಿಂದ ಬೈಕಂಪಾಡಿಗೆ ಹಾಗೂ ನಂತೂರಿನಿಂದ ಕೂಳೂರು ವರೆಗೆ ಎಲಿವೇಟೆಡ್ ರಸ್ತೆ ನಿರ್ಮಾಣವಾಗಬೇಕಾಗಿದೆ.
ಸುರತ್ಕಲ್-ಬಿ.ಸಿ.ರೋಡ್ ಬೈಪಾಸ್ ರಸ್ತೆ ರಚನೆಯಾಗಬೇಕಾಗಿದ್ದು, ಇವಕ್ಕೆಲ್ಲ ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ ಜೊತೆ ಮಾತುಕತೆ ನಡೆಸಲು ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಅವರ ಸಾಥ್ ಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಂಗಳೂರಿಗೆ ಆಗಮಿಸುವವರಿಗೆ ಪಂಪ್‌ವೆಲ್ ಮಹಾವೀರ ವೃತ್ತದ ಕಲಶ ಗೌರವ ಸೂಚಕವಾಗಿದೆ. ಇಲ್ಲಿ ಉದ್ದಿಮೆ ನಡೆಸುವವರಿಗೂ ಯಶಸ್ಸು ಸಿಗಲಿ ಎಂದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ , ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಶುಭ ಹಾರೈಸಿದರು. ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷ ಪುಷ್ಪರಾಜ್ ಜೈನ್ ಸ್ವಾಗತಿಸಿದರು. ಮನೋಜ್ ಕುಮಾರ್ ವಾಮಂಜೂರು ನಿರೂಪಿಸಿದರು.







