ಮಂಗಳೂರು: ಅಕ್ರಮ ಪಿಸ್ತೂಲ್ ಹೊಂದಿದ್ದ ಪ್ರಕರಣ; ಇಬ್ಬರ ಬಂಧನ
ಸಿಸಿಬಿ ಪೊಲೀಸರ ಕಾರ್ಯಾಚರಣೆ

ಮಂಗಳೂರು: ಅಕ್ರಮವಾಗಿ ಪಿಸ್ತೂಲ್ ಹೊಂದಿದ್ದ ಪ್ರಕರಣದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮಂಜೇಶ್ವರ ತಾಲೂಕಿನ ಮಿಯಪದವಿನ ಅಬ್ಬಾಸ್ ಯಾನೆ ಬೆಡಿ ಅಬ್ಬಾಸ್ (61), ಹಾಗೂ ಮೂಲತಃ ಪೈವಳಿಕೆಯ ಪ್ರಸ್ತುತ ತೊಕ್ಕೊಟ್ಟು ಸಮೀಪದ ಕುತ್ತಾರ್‌ನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಯಶವಂತ್ ಕುಮಾರ್ (45) ಬಂಧಿತ ಆರೋಪಿಗಳು.
ಬಜಪೆ ಗ್ರಾಮದ ಒಡ್ಡಿದಕಲ ಎಂಬಲ್ಲಿ ಇಬ್ಬರು ವ್ಯಕ್ತಿಗಳು ಬೈಕ್‌ವೊಂದರಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಕಾಯುಧವಾದ ಪಿಸ್ತೂಲ್‌ನ್ನು ವಶದಲ್ಲಿರಿಸಿಕೊಂಡು ತಿರುಗಾಡುತ್ತಿದ್ದರೆಂದು ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಿ ಅವರಿಂದ ಪಿಸ್ತೂಲ್-1, ಮೊಬೈಲ್ ಫೋನುಗಳು-2, ಬೈಕ್ ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ 1,45,000 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬಜ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪೈಕಿ ಅಬ್ಬಾಸ್‌ನ ವಿರುದ್ಧ ಈ ಹಿಂದೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇನ್ನೋರ್ವ ಆರೋಪಿ ಯಶವಂತ ಕುಮಾರ್ ವಿರುದ್ಧ ಪಾಂಡೇಶ್ವರ ಮತ್ತು ಮಂಜೇಶ್ವ ಠಾಣೆಯಲ್ಲಿ ಹಲ್ಲೆ, ಕುಂಬಳೆ ಠಾಣೆಯಲ್ಲಿ ಅಬಕಾರಿ ಕಾಯ್ದೆ ಪ್ರಕರಣ ಹಾಗೂ ಬದಿಯಡ್ಕ ಠಾಣೆಯಲ್ಲಿ ಕೊಲೆ ಪ್ರಕರಣವೊಂದು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್‌ಎಂ, ಎಸ್ಸೈಗಳಾದ ರಾಜೇಂದ್ರ ಬಿ, ಸುದೀಪ್ ಎಂ ವಿ, ಶರಣಪ್ಪ ಭಂಡಾರಿ, ನರೇಂದ್ರ, ಎಸ್ಸೈ ಮೋಹನ್ ಕೆವಿ ಹಾಗೂ ಸಿಬ್ಬಂದಿ ವರ್ಗವು ಪಾಲ್ಗೊಂಡಿತ್ತು.