ಮಂಗಳೂರು| ಮಹಿಳೆಯ ಕತ್ತಿನಿಂದ ಕರಿಮಣಿ ಸರ ಕಸಿದು ಪರಾರಿಯಾಗಿದ್ದ ಆರೋಪಿಯ ಬಂಧನ

ಮಂಗಳೂರು: ನಗರದ ಕೊಂಚಾಡಿ ಕೊಪ್ಪಳಕಾಡು ಎಂಬಲ್ಲಿ ಮಹಿಳೆಯ ಕುತ್ತಿಗೆಯಿಂದ 32 ಗ್ರಾಂ ತೂಕದ ಕರಿಮಣಿ ಸರ ಕಸಿದು ಪರಾರಿಯಾಗಿದ್ದ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ರೋಹಿತ್ (25) ಬಂಧಿತ ಆರೋಪಿಯಾಗಿದ್ದಾನೆ. ಡಿ.25ರಂದು ಸಂಜೆ 6.30ಕ್ಕೆ ಕೊಂಚಾಡಿ ಗುರುನಗರದ ನಿವಾಸಿಗಳಾದ ರತ್ನಾವತಿ ಮತ್ತವರ ಮಗಳು ರಶ್ಮಿ ಯೆಯ್ಯಾಡಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಕೊಪ್ಪಳಕಾಡು ರಸ್ತೆಯಲ್ಲಿ ಅಪರಿಚಿತ ವ್ಯಕ್ತಿ ರತ್ನಾವತಿಯ ಕುತ್ತಿಗೆಗೆ ಕೈ ಹಾಕಿ ಕರಿಮಣಿ ಸರ ಕಸಿದು ಪರಾರಿಯಾಗಿದ್ದರು.
ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ರವಿವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಿದ್ದಾರೆ. ಈತನಿಂದ ಕಳವು ಮಾಡಲಾದ 32 ಗ್ರಾಂ ಚಿನ್ನದ ಕರಿಮಣಿ ಸರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಇಲೆಕ್ಟ್ರಿಕ್ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.
Next Story





