ಮಂಗಳೂರು | ಡಿ.20ರಂದು ಹಳೆ ವಿದ್ಯಾರ್ಥಿ ಸಮಾವೇಶ ‘ನಿಟ್ಟೆ ನೆಕ್ಸಸ್’

ಮಂಗಳೂರು, ನ.26: ವೆನಮಿತಾ ( ಎನ್ಎಂಎಎಂಐಟಿ ಹಳೆ ವಿದ್ಯಾರ್ಥಿ ಸಂಘ ) ಮತ್ತು ಮಾಹಾಲಿಂಗ ಅಡ್ಯಂತಾಯ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಾಜಿ (ಎನ್ಎಂಎಎಂಐಟಿ) ನಿಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಜಾಗತಿಕ ಹಳೆಯ ವಿದ್ಯಾರ್ಥಿ ಸಮಾವೇಶ ‘ನಿಟ್ಟೆ ನೆಕ್ಸಸ್ -2025’ ಮುಲ್ಕಿಯ ಸುಂದರ ರಾಮ ಶೆಟ್ಟಿ ಕನ್ವೆನ್ಶನ್ ಸೆಂಟರ್ ನಲ್ಲಿ ಡಿಸೆಂಬರ್ 20ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ ಎಂದು ವೆನಮಿತಾ ಅಧ್ಯಕ್ಷ ಮುಲ್ಕಿ ಜೀವನ್ ಕೆ. ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
1986ರಲ್ಲಿ ಸ್ಥಾಪಿತವಾದ ಹಳೆ ವಿದ್ಯಾರ್ಥಿ ಸಂಘವು 25,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಹಳೆಯ ಸ್ನೇಹಿತರೊಂದಿಗೆ ಪುನರ್ ಸಂಪರ್ಕ, ವೃತ್ತಿ ನೆಟ್ವರ್ಕಿಂಗ್ ಹಾಗೂ ಉದ್ಯಮ-ಶೈಕ್ಷಣಿಕ ಸಹಯೋಗ ಬೆಳೆಸುವ ಉದ್ದೇಶದಿಂದ ಈ ಜಾಗತಿಕ ಮಹಾಸಂಗಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು ನಿಟ್ಟೆ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರು ಹಾಗೂ ನಿಟ್ಟೆ ವಿವಿಯ ಚಾನ್ಸಲರ್ ಎನ್. ವಿನಯ್ ಹೆಗ್ಡೆ ಉದ್ಘಾಟಿಸಲಿರುವರು. ವಿಶ್ವದ ಅನೇಕ ಭಾಗಗಳಿಂದ ಸುಮಾರು 1,000 ಹಳೆಯ ವಿದ್ಯಾರ್ಥಿಗಳು ಈ ಬಹುನಿರೀಕ್ಷಿತ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವೆನಮಿತಾ ಉಪಾಧ್ಯಕ್ಷ ಅವಿನಾಶ ಕೃಷ್ಣ ಕುಮಾರ್, ಸಂಚಾಲಕ ಸಂದೀಪ್ ರಾವ್ ಇಡ್ಯಾ, ಸಹ ಸಂಚಾಲಕರಾದ ಮಹೇಶ್ ಕಾಮತ್ ಮತ್ತು ಮೇಘನಾ ಶೆಟ್ಟಿ ಉಪಸ್ಥಿತರಿದ್ದರು.







