ಮಂಗಳೂರು: ಬೀದಿ ನಾಯಿಗಳಿಗಾಗಿ ಪ್ರಾಣಿ ಪ್ರಿಯ ಸಂಘಗಳಿಂದ ಪ್ರತಿಭಟನೆ

ಮಂಗಳೂರು,ಜ.4: ನಾಯಿಗಳ ವಿಚಾರಕ್ಕೆ ಸಂಬಂಧಿಸಿ ನ.7ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ಮಧ್ಯಂತರ ತೀರ್ಪನ್ನು ವಿರೋಧಿಸಿ ಮತ್ತು ಬೀದಿ ನಾಯಿಗಳ ನಿರ್ವಹಣೆಗೆ ವೈಜ್ಞಾನಿಕ ಹಾಗೂ ಮಾನವೀಯ ಕ್ರಮಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ಮಟ್ಟದ ಪ್ರಾಣಿ ಕಲ್ಯಾಣ ಸಂಘಟನೆಗಳು ಹಾಗೂ ಪ್ರಾಣಿಪ್ರಿಯರು ರವಿವಾರ ನಗರದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು.
ನಗರದಲ್ಲಿ 25 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿವೆ. ಹಾಗಾಗಿ ಒಂದೇ ಎನಿಮಲ್ ಬರ್ತ್ ಕಂಟ್ರೋಲ್ ಕೇಂದ್ರ ಸಾಲದು. ಸರಕಾರ ತಕ್ಷಣ ನಗರ ಸೇರಿದಂತೆ ಎಲ್ಲೆಡೆ ಹೆಚ್ಚಿನ ಎಬಿಸಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಅನಿಮಲ್ ಕೇರ್ ಟ್ರಸ್ಟ್‌ನ ಸುಮಾ ನಾಯಕ್ ಆಗ್ರಹಿಸಿದರು.
ನ.7ರಿಂದ ಪ್ರಾಣಿ ಕಲ್ಯಾಣ ಸಂಘಟನೆಗಳು ಸಲ್ಲಿಸಿರುವ ಹಸ್ತಕ್ಷೇಪ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಆಗ್ರಹವು ಕೇಂದ್ರ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಉದ್ದೇಶಿಸಿ ಪೋಸ್ಟಲ್ ಚಳವಳಿ ನಡೆಸಲಾಗಿದೆ. ಇದು ಪ್ರಜಾಪ್ರಭುತ್ವ ದೇಶವಾಗಿರುವು ದರಿಂದ ನಾಗರಿಕರು ಮತ್ತು ಪ್ರಾಣಿ ಕಲ್ಯಾಣ ಸಂಘಟನೆಗಳ ಮನವಿಗಳನ್ನು ನ್ಯಾಯಾಲಯ ಆಲಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ದಿನೇಶ್ ಪೈ, ಹರೀಶ್ ರಾಜ್‌ಕುಮಾರ್, ಪ್ರಾಣಿ ರಕ್ಷಕರಾದ ರಜನಿ ಶೆಟ್ಟಿ, ಡಾ. ಶೃತಿ ರಾವ್ ಉಪಸ್ಥಿತರಿದ್ದರು.







