ಮಂಗಳೂರು: ವಾರದಲ್ಲಿ ಐದು ದಿನಗಳ ಕೆಲಸ ಜಾರಿಗೆ ಆಗ್ರಹಿಸಿ ಬ್ಯಾಂಕ್ ನೌಕರರ ಮುಷ್ಕರ

ಮಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಬ್ಯಾಂಕ್ ನೌಕರರು ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಮಂಗಳವಾರ ಮುಷ್ಕರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಜಿಲ್ಲಾ ಸಂಚಾಲಕ ವಿನ್ಸೆಂಟ್ ಡಿಸೋಜ ಅವರು ಬ್ಯಾಂಕಿಂಗ್ ವಲಯದಲ್ಲಿ ವಾರಕ್ಕೆ 5 ದಿನ ಕೆಲಸದ ದಿನಗಳ ವ್ಯವಸ್ಥೆ ಜಾರಿಗೆ ತರಬೇಕೆಂದು ಬೇಡಿಕೆ ಸಲ್ಲಿಸಲಾಗುತ್ತಿದ್ದರೂ, ಈವರೆಗೂ ಜಾರಿಗೆ ಬಂದಿಲ್ಲ ಎಂದು ಬ್ಯಾಂಕ್ ದೂರಿದರು.
2015ರಲ್ಲಿ ಸಹಿ ಮಾಡಲಾದ 10ನೇ ದ್ವಿಪಕ್ಷೀಯ ಒಪ್ಪಂದದಂತೆ ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರವನ್ನು ರಜೆ ಎಂದು ಘೋಷಿಸಲಾಗಿದೆ. ಉಳಿದ ಶನಿವಾರಗಳನ್ನು ಅರ್ಧ ದಿನದ ಬದಲು ಪೂರ್ಣ ಕೆಲಸದ ದಿನಗಳಾಗಿ ಮಾಡಲಾಗಿದೆ. ಆ ವೇಳೆ ಉಳಿದ ಎಲ್ಲ ಶನಿವಾರಗಳನ್ನು ರಜೆ ಎಂದು ಘೋಷಿಸುವ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದು ಎಂದು ನೀಡಿದ್ದ ಭರವಸೆಯನ್ನು ಇನ್ನೂ ಈಡೇರಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
2015ರಿಂದ ಈ ಬೇಡಿಕೆಯನ್ನು ಸಲ್ಲಿಸುತ್ತಿದ್ದರೂ ಸರಕಾರ ಈಡೇರಿಸಿಲ್ಲ. ರಿಸರ್ವ್ ಬ್ಯಾಂಕ್, ಎಲ್‌ಐಸಿ, ಕೇಂದ್ರ ಸರಕಾರದ ಕಚೇರಿಗಳು, ವಿದೇಶಿ ವಿನಿಮಯ, ಷೇರು ಮಾರುಕಟ್ಟೆ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ವಾರದಲ್ಲಿ ಐದು ದಿನದ ಕೆಲಸದ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾತ್ರ ಅನುಷ್ಠಾನಗೊಂಡಿಲ್ಲ ಎಂದು ನೌಕರರು ಹೇಳಿದರು.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಸಂಘಟನೆಯ ನೇತೃತ್ವದಲ್ಲಿ ನಡೆದ ಮುಷ್ಕ್ಕರದಲ್ಲಿ ವಿವಿಧ ಬ್ಯಾಂಕಿಂಗ್ ಸಂಘಟನೆಗಳ ಪ್ರಮುಖರಾದ ಫಣೀಂದ್ರ ಕೆ.ಜಿ, ಸುರೇಶ್ ಎಸ್. ಹೆಗ್ಡೆ, ನಿಖಿತ್, ಸುನಿಲ್, ಪ್ರಶಾಂತ್ ಮೊದಲಾದವರು ಪಾಲ್ಗೊಂಡಿದ್ದರು.
ಸಾವಿರಕ್ಕೂ ಅಧಿಕ ಬ್ಯಾಂಕ್ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







