ಮಂಗಳೂರು: ಬಾಕಿ ತುಟ್ಟಿಭತ್ತೆ, ಕನಿಷ್ಠ ಕೂಲಿಗೆ ಆಗ್ರಹಿಸಿ ಬೀಡಿ ಕಾರ್ಮಿಕರ ಧರಣಿ

ಮಂಗಳೂರು, ಆ.3: ಬೀಡಿ ಕಾರ್ಮಿಕರಿಗೆ 2015ರಿಂದ 2018ರವರೆಗೆ ಬಾಕಿ ಇರುವ ತುಟ್ಟಿಭತ್ತೆ, ಹಾಗೂ ಕನಿಷ್ಠ ಕೂಲಿಯನ್ನು ನೀಡುವಂತೆ ಒತ್ತಾಯಿಸಿ ಲಾಲ್‌ಬಾಗ್‌ನ ಸೌತ್ ಕೆನರಾ ಹೋಂ ಇಂಡಸ್ಟ್ರೀಸ್‌ನ ಎದುರು ಬೀಡಿ ಕಾರ್ಮಿಕರು ಧರಣಿ ನಡೆಸಿದರು.
ಮಂಗಳೂರು ಬೀಡಿ ಕೆಲಸಗಾರರ ಸಂಘ(ಸಿಐಟಿಯು)ಹಾಗೂ ಅಳಪೆ ಪ್ರದೇಶದ ಬೀಡಿ ಲೇಬರ್ ಯೂನಿಯನ್‌ನ ವತಿಯಿಂದ ನಡೆದ ಧರಣಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಬೀಡಿ ಫೆಡರೇಶನ್‌ನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಬೀಡಿ ಕಾರ್ಮಿಕರಿಗೆ 15ರಿಂದ 18 ಗಂಟೆಗಳ ಕಾಲ ಕೆಲಸ ಮಾಡಿದರೆ ಸಿಗುವ ಕೂಲಿ 150 ರೂ.ನಷ್ಟು. ಇದರಿಂದ ಬದುಕುವುದೇ ಹೇಗೆ ಎಂದು ಪ್ರಶ್ನಿಸಿದರು.
ಬೀಡಿ ಕಾರ್ಮಿಕರ ಸಂಘಟಿತ ಹೋರಾಟದ ಪರಿಣಾಮ ಬೆಲೆ ಏರಿಕೆ ಸರಿದೂಗಿಸಲು ತುಟ್ಟಿಭತ್ತೆ ಸೌಲಭ್ಯ ಜಾರಿಗೆ ಬಂದಿದೆ. 2015ರಲ್ಲಿ ರಾಜ್ಯ ಸರಕಾರ ಬೀಡಿ ಮಾಲಕರು ತುಟ್ಟಿಭತ್ತೆ ನೀಡುವುದಕ್ಕೆ ವಿನಾಯಿತಿ ನೀಡಿ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಸಿಐಟಿಯು ನೇತೃತ್ವದ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ನೇತೃತ್ವದಲ್ಲಿ ಹೋರಾಟ ನಡೆಸಿದ ಪರಿಣಾಮ ಆದೇಶ ಹಿಂಪಡೆಯಲಾಆಯಿತು. ಆದರೆ ಬೀಡಿ ಮಾಲಕರು ಇದರ ವಿರುದ್ಧ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಇದರ ವಿರುದ್ಧ ಕಾರ್ಮಿಕ ಸಂಘಟನೆಗಳು ಕಾನೂನು ಸಮರ ನಡೆಸಿದ ಪರಿಣಾಮ ನ್ಯಾಯಾಲಯದಲ್ಲಿ ಸರಕಾರದ ಆದೇಶ ಎತ್ತಿ ಹಿಡಿಯಲಾಯಿತು. ಇದರಿಂದ ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ 12.75 ರೂ.ನಂತೆ 2015ರ ಎಪ್ರಿಲ್1ರಿಂದ ನೀಡಬೇಕಾಗಿದೆ. ಮೂರು ವರ್ಷಗಳಿಂದ ತುಟ್ಟಿಭತ್ತೆ ಬಾಕಿ ಇದ್ದು, ಈಗ ಹೊಸ ಸರಕಾರದಲ್ಲಿ ಮತ್ತೆ ಬೀಡಿ ಮಾಲಕರು ರಿಯಾಯಿತಿ ಕೇಳಿರುವುದು ಅನ್ಯಾಯದ ಪರಮಾವಧಿ ಎಂದು ಹೇಳಿದರು.
ಕನಿಷ್ಠ ಕೂಲಿ ಆಗ್ರಹದ ಕುರಿತಂತೆಯೂ ಮಾಲಕರು ನ್ಯಾಯಾಲಯದ ಮೆಟ್ಟಿಲೇರಿದ್ದು, 18 ಬಾರಿ ವಿಚಾರಣೆ ನಡೆಸಿದರೂ ಸರಕಾರದ ಪರವಾಗಿ ಯಾರೂ ಹಾಜರಾಗಿಲ್ಲ. ಈ ಮೂಲಕ ಬೀಡಿ ಕಾರ್ಮಿಕರ ಬಗೆಗಿನ ಸರಕಾರದ ಕಾಳಜಿ ವ್ಯಕ್ತವಾಗಿದೆ ಎಂದವರು ಆಕ್ಷೇಪಿಸಿದರು.
ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಹಿಂದೆ ಕಾರ್ಮಿಕರ ಚಿಕಿತ್ಸೆಗೆ ಹಣ ಲಭ್ಯವಾಗುತ್ತಿತ್ತು. ಆದರೆ ಕೇಂದ್ರ ಸರಕಾರ ಮಂಡಳಿಯನ್ನು ನಿಷ್ಕ್ರಿಯ ಮಾಡಿದೆ. ಬೀಡಿಗೆ 28 ರೂ. ತೆರಿಗೆ ಹಾಕಲಾಗುತ್ತಿದೆ. ಇದು ಸರಕಾರಕ್ಕೆ ಬೊಕ್ಕಸಕ್ಕೆ ಸೇರುತ್ತಿದೆಯಾದರೂ ಕಾರ್ಮಿಕರಿಗೆ ಇದರ ಪ್ರಯೋಜನ ನೀಡದೆ ಕೇಂದ್ರ ಸರಕಾರ ವಂಚಿಸುತ್ತಿದೆ ಎಂದು ಅವರು ಆರೋಪಿಸಿದರು.
ಬೀಡಿ ಕೈಗಾರಿಕೆ ನಿಷೇಧಿಸುವ ಮೊದಲು ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಒದಗಿಸಬೇಕು. ಕೆಲಸ ಮಾಡಲು ಸಾಧ್ಯವಾಗದ ಕಾರ್ಮಿಕರಿಗೆ ಕನಿಷ್ಠ 5,000 ರೂ. ಮಾಸಿಕ ಪರಿಹಾರ ನೀಡಬೇಕು. ಕಾರ್ಮಿಕರಿಗೆ ಸಿಗುವ ಪಿಂಚಣಿಯನ್ನು ಕನಿಷ್ಠ 3,000 ರೂ.ಗಳಿಗೆ ಏರಿಕೆ ಮಾಡಬೇಕು ಎಂದು ಅವರು ಈ ಸಂದರ್ಭ ಆಗ್ರಹಿಸಿದರು.
ಫೆಡರೇಶನ್‌ನ ಅಧ್ಯಕ್ಷ ವಸಂತ ಆಚಾರಿ ಮತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಒಳ್ಳೆಯವರು ಎಂದು ಹೇಳುತ್ತಾರೆ. ಆದರೆ ಅತ್ಯಂತ ಕೆಳಮಟ್ಟದಲ್ಲಿ ಜೀವನ ಸಾಗಿಸುವ ಬೀಡಿ ಕಾರ್ಮಿಕರಿಗೆ 3000 ರೂ. ಪಿಂಚಣಿ ನೀಡಲು ಅವರಿಂದ ಸಾಧ್ಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಸಿಐಟಿಯು ಮುಖಂಡ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಶಾಸಕರಾದ ವೇದವ್ಯಾಸ ಕಾಮತ್ ಅಥವಾ ಡಾ. ಭರತ್ ಶೆಟ್ಟಿಯವರು ವಿಧಾನಸಭೆಯಲ್ಲಿ ಬೀಡಿ ಕಾರ್ಮಿಕರ ಸಮಸ್ಯೆಯನ್ನು ಎಂದೂ ಪ್ರಸ್ತಾಪಿಸಿಲ್ಲ. ಲೋಕಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಈ ಬಗ್ಗೆ ಮಾತನಾಡಿಲ್ಲ. ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ನ್ಯಾಯ ದೊರೆಯದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಅವರು ಹೇಳಿದರು.
ಧರಣಿಯಲ್ಲಿ ಮಂಗಳೂರು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಭಾರತಿ ಬೋಳಾರ್, ಅಳಪೆ ಪ್ರದೇಶ ಬೀಡಿ ಲೇಬರ್ ಯೂನಿಯನ್‌ನ ಅಧ್ಯಕ್ಷೆ ಜಯಂತಿ ಶೆಟ್ಟಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮೀ ಇನ್ನಿತರರು ಉಪಸ್ಥಿತರಿದ್ದರು.