ಮಂಗಳೂರು | ಭಾಸ್ಕರಾಭಿನಂದನ ಕಾರ್ಯಕ್ರಮ: ಆಮಂತ್ರಣ ಪತ್ರಬಿಡುಗಡೆ

ಮಂಗಳೂರು,ನ.29: ಸಹಕಾರ, ಕಂಬಳ, ಕೃಷಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ ಕರಾವಳಿಯ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಕೊಳಕೆ ಇರ್ವತ್ತೂರು ಭಾಸ್ಕರ್ ಎಸ್.ಕೋಟ್ಯಾನ್ ರಿಗೆ ಕರ್ನಾಟಕ ಸರಕಾರದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಬಂದಿರುವುದು ನಮಗೆಲ್ಲ ಹೆಮ್ಮೆ. ಈ ಹಿನ್ನಲೆಯಲ್ಲಿ ಅವರಿಗೆ ಭಾಸ್ಕರಾಭಿನಂದನ ನಾಗರಿಕ ಪೌರ ಸನ್ಮಾನ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿ ಸಂಚಾಲಕ ಕೆ.ಟಿ. ಸುವರ್ಣ ಹೇಳಿದ್ದಾರೆ.
ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ದ.ಕ. ಸಹಕಾರಿ ನೌಕರರ ಸಹಕಾರ ಸಂಘದ ಕಚೇರಿಯಲ್ಲಿ ಶನಿವಾರ ಭಾಸ್ಕರಾಭಿನಂದನ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೊಳಕೆ ಇರ್ವತ್ತೂರು ಭಾಸ್ಕರ್ ಎಸ್.ಕೋಟ್ಯಾನ್ ವ್ಯಕ್ತಿತ್ವವೇ ಮಾದರಿಯಾದದ್ದು. ಸಮಾಜದಲ್ಲಿ ನೊಂದವನಿಗೆ ನೆರವು ನೀಡಿದ ಹೃದಯವಂತರು. ಕಂಬಳ ಕ್ರೀಡೆಗೆ ಸುಪ್ರೀಂಕೋರ್ಟ್ ನಿಷೇಧ ಹೇರಿದಾಗ ಕಂಬಳ ಸಮಿತಿ ಅಧ್ಯಕ್ಷರಾಗಿದ್ದ ಭಾಸ್ಕರ್ ಕೋಟ್ಯಾನ್ ನಗರದ ರಾಜಬೀದಿಯಲ್ಲಿ ಕಂಬಳ ಕೋಣಗಳ ಮೆರವಣಿಗೆ ಮಾಡಿಸಿ ಸರಕಾರಕ್ಕೆ ಆ ಕ್ರೀಡೆಯ ಮಹತ್ವವನ್ನು ಸಾರಿ ಹೇಳಿದವರು.
ಸಹಕಾರಿ ಕ್ಷೇತ್ರದಲ್ಲಿ ನೂರಾರು ಕುಟುಂಬಗಳಿಗೆ ಉದ್ಯೋಗ, ನೆರವು ನೀಡುವ ಮೂಲಕ ಬೆಳಕಾದವರು. ಅರ್ಹವಾಗಿಯೇ ಅವರಿಗೆ ಕರ್ನಾಟಕ ರಾಜ್ಯ ಸರಕಾರ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ನೀಡಿದೆ ಎಂದರು.
ಭಾಸ್ಕರಾನಂದ ಸಮಿತಿ ಪ್ರಧಾನ ಸಂಚಾಲಕ ಸದಾನಂದ ಪೂಜಾರಿ ಅವರು ಮಾತನಾಡಿ, ಇರ್ವತ್ತೂರು ಭಾಸ್ಕರ್ ಕೋಟ್ಯಾನ್ ಅವರಿಗೆ ನಾಗರಿಕ ಪೌರ ಸನ್ಮಾನದ ಹಿನ್ನಲೆಯಲ್ಲಿ ಭಾಸ್ಕರಾಭಿನಂದನ ಕಾರ್ಯಕ್ರಮವನ್ನು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಡಿ.6ರಂದು ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿದೆ. ಇದರ ಯಶಸ್ಸಿಗೆ ಎಲ್ಲರೂ ಕೈಜೋಡಿಸುವ ಮೂಲಕ ಉತ್ತಮ ಸಂಘಟಕ, ಸಾಧಕನಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ದ.ಕ. ಸಹಕಾರಿ ನೌಕರರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ, ಆತ್ಮಶಕ್ತಿ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ದಂತ ವೈದ್ಯ ಡಾ.ರಾಹುಲ್ ತೋನ್ಸೆ, ಮಾಜಿ ಕಾರ್ಪೊರೇಟರ್ ದೀಪಕ್ ಪೂಜಾರಿ, ಕಾರ್ಪೊರೇಟರ್ ಕಿರಣ್ ಕೋಡಿಕಲ್, ಉದ್ಯಮಿ ಸುಚೇತನ್ ಜಿ.ಪೂಜಾರಿ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ವಕೀಲರಾದ ಶ್ರೀಧರ್ ಎಣ್ಮಕಜೆ, ಬೋಳಾರ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ರಮಾನಂದ ಪೂಜಾರಿ, ಉದ್ಯಮಿ ಅವಿನಾಶ್ ಸುವರ್ಣ ಉಪಸ್ಥಿತರಿದ್ದರು.







