ಮಂಗಳೂರು | ಜಾನುವಾರು ವಧೆ: ಓರ್ವ ಆರೋಪಿ ಸೆರೆ

ಮಂಗಳೂರು, ನ.16: ಅಕ್ರಮವಾಗಿ ಜಾನುವಾರು ವಧೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ ಘಟನೆ ರವಿವಾರ ಬಂಟ್ವಾಳ ತಾಲೂಕು ಅರಳ ಗ್ರಾಮದಲ್ಲಿ ನಡೆದಿದೆ.
ಅರಳ ಗ್ರಾಮದ ನಿವಾಸಿ ಮಯ್ಯದ್ದಿ (57) ಬಂಧಿತ ಆರೋಪಿ. ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಮನೆಯ ಆವರಣದಲ್ಲಿರುವ ಶೆಡ್ ಬಳಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮೂವರು ಮಾಂಸ ಮಾಡುತ್ತಿರುವುದು ಕಂಡುಬಂದಿದೆ.
ಶೆಡ್‌ನಲ್ಲಿದ್ದ ಮೂರು ಹಸುಗಳನ್ನು ಮತ್ತು ಒಂದು ಕರುವನ್ನು ರಕ್ಷಿಸಲಾಗಿದೆ. ಸ್ಥಳದಿಂದ ಸುಮಾರು 150 ಕೆ.ಜಿ. ಮಾಂಸ ವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ತಲೆಮರೆಸಿಕೊಂಡ ಆರೋಪಿಗಳ ಪತ್ತೆಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಪರವಾನಿಗೆ ಇಲ್ಲದೇ ಮನೆಯ ಶೆಡ್‌ನಲ್ಲಿ ಜಾನುವಾರುಗಳನ್ನು ವಧೆ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಈತನ ಮನೆ ಹಾಗೂ ಶೆಡ್‌ನ ಆವರಣವನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಜಪ್ತಿ ಮಾಡಿ, ಮಂಗಳೂರು ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗೆ ಮುಟ್ಟುಗೋಲು ಹಾಕುವಂತೆ ವರದಿ ಸಲ್ಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







