ಮಂಗಳೂರು | ನಿರ್ಲಕ್ಷ್ಯದ ಚಾಲನೆ ಆರೋಪ; ಸಿಟಿ ಬಸ್ ಪೊಲೀಸ್ ವಶಕ್ಕೆ

ಮಂಗಳೂರು, ನ.26: ನಗರದ ಬಿಜೈ ಸರಕಾರಿ ಬಸ್ ನಿಲ್ದಾಣದ ಎದುರಿನ ಜಂಕ್ಷನ್‌ನಲ್ಲಿ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಬಸ್ಸನ್ನು ಅಡ್ಡಗಟ್ಟಿದ ಸಾರ್ವಜನಿಕರು ಪಾಂಡೇಶ್ವರ ಸಂಚಾರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬುಧವಾರ ನಗರದ ಲಾಲ್‌ಭಾಗ್ ಕಡೆಯಿಂದ ಮಂಗಳಾದೇವಿಗೆ ಹೋಗುತ್ತಿದ್ದ ರೂಟ್ ನಂಬ್ರ 15ರ ಬಸ್ಸನ್ನು ಅದರ ಚಾಲಕ ಜಂಕ್ಷನ್‌ನಲ್ಲಿ ಯದ್ವಾತದ್ವಾ ಚಲಾಯಿಸಿಕೊಂಡು ಓವರ್‌ಟೇಕ್ ಮಾಡಲು ಯತ್ನಿಸಿದ್ದ ಎನ್ನಲಾಗಿದೆ.
ಈ ಸಂದರ್ಭ ಬಸ್ ಜಂಕ್ಷನ್‌ನಲ್ಲಿ ನಿಂತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ರಸ್ತೆಗೆ ಬಿದ್ದಿದ್ದರೆ, ಜಂಕ್ಷನ್‌ನಲ್ಲಿ ನಿಂತಿದ್ದ ಇತರರು ಯದ್ವಾತದ್ವಾ ಬಸ್ ಬರುತ್ತಿರುವುದನ್ನು ಕಂಡು ಆತಂಕಗೊಂಡರು.ಹಾಗೇ ಬಳಿಕ ಸಾರ್ವಜನಿಕರು ಬಸ್ ಚಾಲಕನನ್ನು ಕೆಳಗಿಳಿಸಿ ಪೊಲೀಸರಿಗೆ ಮಾಹಿತಿ ನೀಡಿ ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೊಲೀಸರು ಬಸ್ಸನ್ನು ಕೊಂಡೊಯ್ದು ಠಾಣೆಯಲ್ಲಿಟ್ಟು, ದಂಡ ಪಾವತಿಸಿದ ಬಳಿಕ ಕೊಂಡೊಯ್ಯುವಂತೆ ಸೂಚಿಸಿದ್ದಾರೆ.
Next Story





