ಮಂಗಳೂರು | ಕಾರ್ಮಿಕರಿಗೆ ಉಚಿತ ಕಾನೂನು ಸಲಹೆ , ನೆರವು ನೀಡಲು ಚಿಂತನೆ : ಕರೀಷ್ಮಾ

ಮಂಗಳೂರು, ಡಿ.10: ಕಾರ್ಮಿಕರಿಗೆ ಸಂಬಂಧಿಸಿದ ಯಾವುದೇ ಕಾನೂನು ಸಮಸ್ಯೆಗಳಿಗೆ ಉಚಿತ ಕಾನೂನು ಸಲಹೆ ಮತ್ತು ನೆರವು ನೀಡಲು ಪ್ರತ್ಯೇಕ ಘಟಕ ರಚಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್( ಇಂಟಕ್) ಜಿಲ್ಲಾ ಯುವ ಕಾಂಗ್ರೆಸ್ ಮಹಿಳಾ ಘಟಕದ ನೂತನ ಅಧ್ಯಕ್ಷೆ ಕರೀಷ್ಮಾ ಎಸ್. ಹೇಳಿದ್ದಾರೆ.
ನಗರದಲ್ಲಿ ಇತ್ತೀಚೆಗೆ ನಡೆದ ತಮ್ಮ ಪದಗ್ರಹಣ ಸಮಾರಂಭದ ಬಳಿಕ ಮಾತನಾಡಿದ ಅವರು, ತಾನು ವಕೀಲೆಯಾಗಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ನ್ಯಾಯ ದೊರಕಿಸುವುದು ತನ್ನ ಕರ್ತವ್ಯವಾಗಿದೆ ಎಂದು ಹೇಳಿದರು.
ತಮ್ಮ ಕುಟುಂಬ ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದಿದೆ. ಆ ಮೌಲ್ಯಗಳೇ ತಮಗೆ ನ್ಯಾಯಕ್ಕಾಗಿ ಹೋರಾಡುವ ಶಕ್ತಿ ನೀಡಿ ಬೆಳೆಸಿವೆ ಎಂದು ಹೇಳಿದರು.
ಇಂಟಕ್ ದೇಶದ ಕೋಟ್ಯಂತರ ಕಾರ್ಮಿಕರ ಬೆನ್ನೆಲುಬು ಆಗಿದೆ. ಕಾರ್ಮಿಕರನ್ನು ‘ಓಟ್ ಬ್ಯಾಂಕ್’ ಅಲ್ಲ, ರಾಷ್ಟ್ರ ನಿರ್ಮಾಣದ ಅಡಿಪಾಯ ಎಂದು ಪರಿಗಣಿಸುವ ಏಕೈಕ ಸಂಘಟನೆ ನಮ್ಮದು ಎಂದು ಹೇಳಿದರು.
ಮಹಿಳಾ ಕಾರ್ಮಿಕರು ಎದುರಿಸುತ್ತಿರುವ ಪ್ರಮುಖ ಸವಾಲುಗಳಾದ ವೇತನ ತಾರತಮ್ಯ, ಸುರಕ್ಷತಾ ಕೊರತೆ, ಕೆಲಸದ ಸ್ಥಳದಲ್ಲಿ ಕಿರುಕುಳ, ಶಿಶುಪಾಲನಾ ಸೌಲಭ್ಯಗಳ ಅಭಾವ ಮುಂತಾದ ಸಮಸ್ಯೆಗಳ ವಿರುದ್ಧ ಹೋರಾಡುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ. ಸುರಯ್ಯ ಅಂಜುಮ್, ಇಂಟಕ್ ರಾಜ್ಯ ಅಧ್ಯಕ್ಷ ಡಾ.ಲಕ್ಷ್ಮೀ ವೆಂಕಟೀಶ್, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಇಂಟಕ್ ಅಧ್ಯಕ್ಷ ಟಿ.ವೈ ಕುಮಾರ್, ಉಪಾಧ್ಯಕ್ಷ ರಮೇಶ್ , ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ವಹಾಬ್ ಕುದ್ರೋಳಿ, ವಕೀಲ ಹಫೀಝ್, ಮತ್ತಿತರರು ಉಪಸ್ಥಿತರಿದ್ದರು.







