ಮಂಗಳೂರು| ಉದ್ದಿಮೆ ಪರವಾನಿಗೆ, ಆಸ್ತಿ ತೆರಿಗೆ ಪಾವತಿ ರಶೀದಿಯ ನಕಲಿ ದಾಖಲೆ ಸೃಷ್ಟಿ: ಆರೋಪಿ ಪೃಥ್ವಿರಾಜ್ ಶೆಟ್ಟಿ ಸೆರೆ

ಮಂಗಳೂರು, ಜು.30: ಮಂಗಳೂರು ಮಹಾ ನಗರ ಪಾಲಿಕೆಯ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಪಾವತಿ ರಶೀದಿಯ ನಕಲಿ ಸೃಷ್ಟಿಸಿ ಇಬ್ಬರಿಗೆ ವಂಚಿಸಿದ ಪ್ರಕರಣದ ಆರೋಪಿ ಉಜ್ಜೋಡಿಯ ಪೃಥ್ವಿರಾಜ್ ಶೆಟ್ಟಿ ಯಾನೆ ಮುನ್ನ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನಕಲಿ ದಾಖಲಾತಿಗಳನ್ನು ಸೃಷ್ಟಿಸಲು ಬಳಸಿದ ಸಲಕರಣೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಲ್ಲದೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ರಾಜ ದುರ್ಗಾ ಫರ್ನಿಚರ್ ವರ್ಕ್ಸ್ ಎಂಬ ಉದ್ದಿಮೆ ನಡೆಸುತ್ತಿರುವ ಬಾಲಕೃಷ್ಣ ಸುವರ್ಣ ಎಂಬವರು ನ್ಯಾಯಾಲಯದ ಪ್ರಕರಣದಲ್ಲಿ ವ್ಯವಹರಿಸಲು ಮಹಾ ನಗರ ಪಾಲಿಕೆಗೆ ಭೇಟಿ ನೀಡಿ ದಾಖಲಾತಿಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ತನ್ನ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಅನೂರ್ಜಿತಗೊಂಡಿರುವುದು ತಿಳಿದು ಬಂದಿತ್ತು. ಅದನ್ನು ಪರಿಶೀಲಿಸಿದಾಗ ಬಾಲಕೃಷ್ಣ ಸುವರ್ಣರಿಂದ ಪೃಥ್ವಿರಾಜ್ ಶೆಟ್ಟಿಯು 27,990 ರೂ. ಪಡೆದುಕೊಂಡು ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ರಶೀದಿಗಳನ್ನು ನಕಲಿಯಾಗಿ ಸೃಷ್ಟಿಸಿ ನೀಡಿರುವುದು ಕಂಡು ಬಂದಿತ್ತು.
ಸಂಶಯಗೊಂಡ ನಗರ ಪಾಲಿಕೆಯ ಆಯುಕ್ತರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅಲ್ಲದೆ ಬಾಲಕೃಷ್ಣ ಸುವರ್ಣ ಈ ಬಗ್ಗೆ ಪೃಥ್ವಿರಾಜ್ ಶೆಟ್ಟಿಯ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಇನ್ನೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಪೃಥ್ವಿರಾಜ್ ಶೆಟ್ಟಿಯು ನಗರದ ಪಂಪ್‌ವೆಲ್‌ನ ಲಕ್ಷ್ಮಿ ಹಾರ್ಡ್‌ವೇರ್ ವರ್ಕ್‌ಶಾಪ್‌ನ ಮಾಲಕ ದೇವಾಂಗ ಕೆ. ಪಟೇಲ್‌ರಿಗೂ ನಕಲಿ ಉದ್ದಿಮೆ ಪರವಾನಿಗೆ ಹಾಗೂ ನಕಲಿ ಆಸ್ತಿ ತೆರಿಗೆಯನ್ನು ಸೃಷ್ಟಿಸಿ ವಂಚಿಸಿದ್ದ. ಈ ಬಗ್ಗೆ ಬರ್ಕೆ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು.
ತನ್ನ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಪಡೆದ ಆರೋಪಿ ಪೃಥ್ವಿರಾಜ್ ಶೆಟ್ಟಿ ಯಾನೆ ಕೇರಳದ ಹಲವು ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ. ಜು.25ರಂದು ಆರೋಪಿಯು ಕಿನ್ನಿಗೋಳಿ ಕಡೆಗೆ ಬರುತ್ತಿರುವ ಮಾಹಿತಿ ಪಡೆದ ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ತಂದೆ ಗಣೇಶ್ ಎಂಬವರು ದೇವಾಂಗ್ ಪಟೇಲ್‌ರ ಅಂಗಡಿಯಲ್ಲಿ ಕಮರ್ಷಿಯಲ್ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದರು. ಗಣೇಶ್‌ರ ಅನಾರೋಗ್ಯದ ಬಳಿಕ ಅಂದರೆ 2004ರಿಂದ ಪೃಥ್ವಿರಾಜ್ ಆ ಕೆಲಸವನ್ನು ಮುಂದುವರಿಸಿದ್ದ. ದೇವಾಂಗ್ ಹಾಗೂ ಅವರ ಪರಿಚಯದ ಬಾಲಕೃಷ್ಣರಿಗೆ ಸಂಬಂಧಿಸಿದ ಉದ್ದಿಮೆಯ 2025-26ನೇ ಸಾಲಿನ ಪರವಾನಿಗೆಯನ್ನು ನವೀಕರಣ ಮಾಡಲು ಹಾಗೂ ಕಟ್ಟಡಗಳ ಆಸ್ತಿ ತೆರಿಗೆ ಪಾವತಿ ಮಾಡಲು ಆರೋಪಿ ಪೃಥ್ವಿರಾಜ್ ಹಣ ಪಡೆದುಕೊಂಡು ತನ್ನ ಮೊಬೈಲ್ ನಲ್ಲಿ ನಗರ ಪಾಲಿಕೆಯ ವ್ಯಾಪಾರ ಪರವಾನಿಗೆ ಹಾಗೂ MCC Property Tax ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ, ಉದ್ದಿಮೆ ಮಾಲಕರ ಮೊಬೈಲ್ ಒಟಿಪಿ ಪಡೆದು ಹಿಂದಿನ ವರ್ಷದ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ರಶೀದಿಯನ್ನು ಡೌನ್ ಲೋಡ್ ಮಾಡಿ, 3rd Party ಅಪ್ಲಿಕೇಶನ್ ಮೂಲಕ ತಾರೀಕು ಮತ್ತಿತರ ಮಾಹಿತಿಗಳನ್ನು ಎಡಿಟ್ ಮಾಡಿ ಪ್ರಿಂಟ್ ತೆಗೆದು ದೇವಾಂಗ್ ಪಟೇಲ್ ಹಾಗೂ ಬಾಲಕೃಷ್ಣ ಸುವರ್ಣರಿಗೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಕಂಕನಾಡಿ ನಗರ ಮತ್ತು ಬರ್ಕೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







