Mangaluru | ಕುದ್ರೋಳಿ ಜಾನುವರು ವಧಾಗೃಹ ಪುನರಾರಂಭಕ್ಕೆ ಮನವಿ

ಮಂಗಳೂರು, ಆ.26: ನಗರದ ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿದ್ದ ಜಾನುವಾರು ವಧಾಗೃಹವನ್ನು ಮತ್ತೆ ತೆರೆಯಬೇಕು ಎಂದು ಜಮೀಯತುಲ್ ಸ-ಅದಾ ಅಸೋಸಿಯೇಶನ್ ನ ನಿಯೋಗ ಸ್ಪೀಕರ್ ಯು.ಟಿ.ಖಾದರ್ ಗೆ ಮನವಿ ಸಲ್ಲಿಸಿದೆ.
ಸುಮಾರು 50 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಈ ವಧಾಗೃಹವನ್ನು ಕಳೆದ ನಾಲ್ಕು ವರ್ಷದಿಂದ ಮುಚ್ಚಲಾಗಿದೆ. ದ.ಕ.ಜಿಲ್ಲೆಯಲ್ಲಿ ಇದೊಂದೇ ಪರವಾನಿಗೆ ಹೊಂದಿರುವ ವಧಾಗೃಹವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಆಡಳಿತವು ಇದನ್ನು ದುರಸ್ತಿಪಡಿಸಿಕೊಡುವುದಾಗಿ ಹೇಳಿ ಇದನ್ನು ಮುಚ್ಚಿಸಿದೆ. ಆದರೆ ನಾಲ್ಕು ವರ್ಷದಿಂದಲೂ ಇದನ್ನು ದುರಸ್ತಿಪಡಿಸಿಲ್ಲ. ಸುಸಜ್ಜಿತಗೊಳಿಸಿಲ್ಲ. ಇದರಿಂದ ಮಾಂಸ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ. ಕಾರ್ಮಿಕರು ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ. ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಆನಾರೋಗ್ಯ ಮತ್ತು ಮನೆ-ಸಂಸಾರದ ಖರ್ಚು ನಿಭಾಯಿಸಲಾಗದೆ ಆತಂಕಿತರಾಗಿದ್ದಾರೆ ಎಂದು ನಿಯೋಗದ ಮುಖಂಡರು ಸ್ಪೀಕರ್ ಅವರ ಗಮನ ಸೆಳೆದಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರು, ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಈ ಹಿಂದೆ ಪ್ರೊಟೀನ್ಭರಿತ ಗೋ ಮಾಂಸ ದೊರಕುತ್ತಿತ್ತು. ವಧಾಗೃಹ ಮುಚ್ಚಿರುವುದರಿಂದ ಕುರಿಮಾಂಸ, ಕೋಳಿಮಾಂಸ ದರವೂ ಹೆಚ್ಚಾಗಿದೆ. ಜನಸಾಮಾನ್ಯರಿಗೆ ಇದನ್ನು ಖರೀದಿಸುವುದು ಅಸಾಧ್ಯವಾಗಿದೆ. ಹಾಗಾಗಿ ಈ ವಧಾಗೃಹವನ್ನು ದುರಸ್ತಿಗೊಳಿಸಿ ಪುನಃ ಆರಂಭಿಸಬೇಕು ಎಂದು ನಿಯೋಗ ಮನವಿ ಮಾಡಿದೆ.
ಅಸೋಸಿಯೇಶನ್ ನ ಅಧ್ಯಕ್ಷ ಜೆ. ಅಬ್ದುಲ್ ಖಾದರ್, ಮುಖಂಡರಾದ ಅಲಿ ಹಸನ್ ಕುದ್ರೋಳಿ, ಮುಸ್ತಾಕ್, ಯೂಸುಫ್ ಸುರತ್ಕಲ್, ಇಸ್ಮಾಯೀಲ್ ಮತ್ತಿತರರು ನಿಯೋಗದಲ್ಲಿದ್ದರು.







