ಮಂಗಳೂರು | ಕಾಲುಸಂಕ ಕುಸಿತ ಸ್ಥಳಕ್ಕೆ ದೋಣಿಯಲ್ಲಿ ತೆರಳಿ ಪರಿಶೀಲಿಸಿದ ಜಿಲ್ಲಾಧಿಕಾರಿ

ಮಂಗಳೂರು,ನ.26: ಕಾಲುಸಂಕ ಕುಸಿತ ಸ್ಥಳಕ್ಕೆ ದೋಣಿಯಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಬುಧವಾರ ಪರಿಶೀಲನೆ ನಡೆಸಿದರಲ್ಲದೆ, ಕಾಲುಸಂಕ ಪುನಃ ನಿರ್ಮಾಣ ಅಥವಾ ದುರಸ್ತಿಯ ಬಗ್ಗೆ ತಾಂತ್ರಿಕ ಅಭಿಪ್ರಾಯ ಪಡೆದು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್ 54ರ ಉಳ್ಳಾಲ ಹೊಯಿಗೆ ಎಂಬಲ್ಲಿ ನೇತ್ರಾವತಿ ನದಿ ತೀರದಲ್ಲಿ ಕಾಲುದಾರಿಯ ಮೂಲಕ ಸಾರ್ವಜನಿಕರು ಸಂಚರಿಸಲು ಲೋಹದ ಕಾಲುಸಂಕವನ್ನು ಬಹಳ ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. 4 ವರ್ಷಗಳ ಹಿಂದೆ ಈ ಸಂಕ ಕುಸಿದು ಬಿದ್ದಿತ್ತು. ಈ ಪ್ರದೇಶದಲ್ಲಿ ಸುಮಾರು 300ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಕಾಲುಸಂಕದ ಮೂಲಕ ನದಿಬದಿಯಲ್ಲಿ ಸಮನಾಂತರವಾಗಿ ನಡೆದು ನಗರ ಸಂಪರ್ಕಿಸಲು ಹತ್ತಿರವಾಗಿತ್ತು. ಕಾಲುಸಂಕ ಕುಸಿದುಬಿದ್ದು, ಸ್ಥಳೀಯರಿಗೆ ದೈನಂದಿನ ಓಡಾಟಕ್ಕೆ ತೊಂದರೆಯಾಗಿತ್ತು. ಈ ಸಂಕವನ್ನು ದುರಸ್ತಿಪಡಿಸಲು ಸ್ಥಳೀಯರು ಬೇಡಿಕೆ ಇಟ್ಟಿದ್ದರು. ಆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಎಚ್.ವಿ.ದರ್ಶನ್ ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ರೊಂದಿಗೆ ದೋಣಿಯಲ್ಲೇ ಕಾಲುಸಂಕ ಇದ್ದ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.





