ಮಂಗಳೂರು| ಮಾದಕ ವಸ್ತು ಹೊಂದಿದ್ದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಮಂಗಳೂರು, ಸೆ.25: ಮಾದಕ ವಸ್ತು ಹೊಂದಿದ್ದ ವ್ಯಕ್ತಿ ಮತ್ತು ಆತನಿಕೆ ಪೂರೈಕೆ ಮಾಡಿದ ಆರೋಪಿಯನ್ನು ಬರ್ಕೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 174 ಗ್ರಾಂ ತೂಕದ ಮಾದಕ ವಸ್ತು ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜಸ್ಥಾನದ ಜಲೋರೊ ಜಿಲ್ಲೆಯ ಪ್ರಸಕ್ತ ಭಗವತಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ವಾಸುದೇವ ಅಲಿಯಾಸ್ ಸ್ಯಾನ್ (48) ಮತ್ತು ಕುದ್ರೋಳಿ ಬಳಿ ವಾಸವಾಗಿರುವ ರಾಜಸ್ತಾನ ಮೂಲದ ಮಂಗಲ್ ಚೌಧರಿ (45) ಬಂಧಿತ ಆರೋಪಿಗಳಾಗಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಬರ್ಕೆ ಠಾಣೆಯ ಎಸ್ಸೈ ವಿನಾಯಕ ತೋರಗಲ್ ಸಿಬ್ಬಂದಿಗಳೊಂದಿಗೆ ಬುಧವಾರ ಮಧ್ಯಾಹ್ನ ಕೊಡಿಯಾಲಬೈಲು ಸಮೀಪದ ಭಗವತಿನಗರದ ಗುಜರಾತಿ ಶಾಲೆಯ ಹಿಂಬದಿಯಲ್ಲಿದ್ದ ವಾಸುದೇವ ನನ್ನು ಬಂಧಿಸಿದ್ದಾರೆ. ಆರೋಪಿಯ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ನ ಕವರ್ ಒಳಗಡೆ ರಾಜಸ್ತಾನಿ ಭಾಷೆಯಲ್ಲಿ ‘ಕಾಲಕಡ್ಡ’ ಎಂದು ಬರೆದ ಮಾದಕ ವಸ್ತು ಪತ್ತೆಯಾಗಿದೆ. ಆತನನ್ನು ವಿಚಾರಿಸಿದಾಗ ಮಂಗಲ್ ಚೌಧರಿಯಿಂದ ಖರೀದಿಸಿ ತಂದಿಟ್ಟುಕೊಂಡಿರುವುದಾಗಿ ತಿಳಿಸಿದ್ದಾನೆ. ವಾಸುದೇವನಿಂದ 9 ಸಾವಿರ ರೂ. ಮೌಲ್ಯದ 174 ಗ್ರಾಂ ತೂಕದ ದ್ರವ ರೂಪದ ಓಪಿಯಂ ಮಾದಕ ವಸ್ತು, 40 ಸಾವಿರ ರೂ. ಮೌಲ್ಯದ ಮೊಬೈಲ್, 50 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಸಹಿತ 99 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.





