ಮಂಗಳೂರು| ಮಾದಕ ವಸ್ತು ಸಾಗಾಟ, ಮಾರಾಟ ಪ್ರಕರಣ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ

ಮಂಗಳೂರು, ಡಿ.20: ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ನಿವಾಸಿ ಟಿ.ಇ. ಜೋಸೆಫ್ (58) ಎಂಬಾತನಿಗೆ 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2008ರಂದು ಬೆಳಗ್ಗೆ 9:30ಕ್ಕೆ ನಗರದ ನೀರೇಶ್ವಾಲ್ಯ ಬಂದರು ಬೈಹುಲ್ಲಿನ ದಕ್ಕೆಯ ಹೊಳೆಯ ಬದಿ ವ್ಯಕ್ತಿಯೊಬ್ಬ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಗ್ರಾಹಕರಿಗೆ ಕಾಯುತ್ತಿದ್ದ. ಈ ಸಂದರ್ಭ ಕರಾವಳಿ ಕಾವಲು ಪಡೆ ಪೊಲೀಸರು ದಾಳಿ ನಡೆಸಿ 2.300 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದರು. ಈ ಬಗ್ಗೆ ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಆರೋಪಿಗೆ 5ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ಹಾಗೂ ದಂಡ ಪಾವತಿಸುವಲ್ಲಿ ವಿಫಲವಾದರೆ 2 ತಿಂಗಳ ಶಿಕ್ಷೆ ಅನುಭವಿಸುವಂತೆ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದಲ್ಲಿ 5 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಲಾಗಿತ್ತು. 9 ದಾಖಲೆಗಳನ್ನು ಗುರುತಿಸಿ ಹಾಜರುಪಡಿಸಲಾಗಿತ್ತು. ಸರಕಾರದ ಪರವಾಗಿ ಜುಡಿತ್ ಒಲ್ಗ ಮಾರ್ಗರೆಟ್ ಕ್ರಾಸ್ತಾ ವಾದಿಸಿದ್ದರು. ಕರಾವಳಿ ಕಾವಲು ಪಡೆಯ ಹಿಂದಿನ ಪೊಲೀಸ್ ನಿರೀಕ್ಷಕ ಮುಕುಂದ ನಾಯಕ್ ದೊಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಜಾಮೀನು ಬಳಿಕ ನಾಪತ್ತೆಯಾಗಿದ್ದ ಆರೋಪಿ
ಆರೋಪಿಯು ಗಾಂಜಾ ಪ್ರಕರಣದಲ್ಲಿ ಬಂಧಿತನಾದ ಬಳಿಕ 2008ರಲ್ಲಿ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ. ನಂತರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು 2024ರ ಫೆ.22ರಂದು ಮತ್ತೆ ಬಂಧಿಸಿದ್ದರು. ಆ ಬಳಿಕ ಜಾಮೀನು ಸಿಗದೆ ಜೈಲಿನಲ್ಲೇ ಇದ್ದ. ಇದೀಗ ಆರೋಪ ಸಾಬೀತಾಗಿದೆ.







