ಮಂಗಳೂರು | ಸಮೀಕ್ಷೆ ವೇಳೆ ಅನಾರೋಗ್ಯಕ್ಕೆ ತುತ್ತಾದ ಗಣತಿದಾರರಿಗೆ ಸನ್ಮಾನ

ಮಂಗಳೂರು,ನ.25: ಕೆಲವು ದಿನಗಳ ಹಿಂದೆ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯ ಕಾರ್ಯದ ವೇಳೆ ಅನಾರೋಗ್ಯಕ್ಕೀಡಾದ ಗಣತಿದಾರರಿಗೆ ಸನ್ಮಾನಿಸುವ ಕಾರ್ಯಕ್ರಮ ಸೋಮವಾರ ನಡೆಯಿತು.
ಕೆಲವು ಶಿಕ್ಷಕರಿಗೆ ಗಣತಿ ಕಾರ್ಯದ ಸಮಯದಲ್ಲಿ ಮನೆ ಮನೆಗೆ ಭೇಟಿ ನೀಡುವಾಗ, ಹೆಜ್ಜೇನು, ಹುಳ, ನಾಯಿಗಳು ಕಚ್ಚಿ ಹಾಗೂ ರಸ್ತೆಯ ಅಪಘಾತಗಳಿಂದ ಅನಾರೋಗ್ಯಕ್ಕೆ ತುತ್ತಾದ ಶಿಕ್ಷಕರನ್ನು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮುಲ್ಕಿ, ಉಳ್ಳಾಲ, ಬಂಟ್ವಾಳಕ್ಕೆ ಭೇಟಿ ನೀಡಿ ಸನ್ಮಾನಿಸಿದರು. ಗಣತಿದಾರರ ಆರೋಗ್ಯ ವಿಚಾರಿಸಿ, ಅಂತಹ ಕಷ್ಟದ ಸಮಯದಲ್ಲೂ ಸಹ ಧೃತಿಗೆಡದೆ ಯಶಸ್ವಿಯಾಗಿ ಗಣತಿ ಕಾರ್ಯವನ್ನು ಪೂರ್ಣಗೊಳಿಸಿದ ಗಣತಿದಾರ ಶಿಕ್ಷಕರನ್ನು ಅಭಿನಂದಿಸಿದರು.
ಮುಲ್ಕಿ ತಾಲೂಕಿನ ಗ್ರಾಪಂ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ, ಮುಲ್ಕಿ ಕೆರೆಕಾಡು ಸರಕಾರಿ ಶಾಲೆಯ ನವೀನ್ ಡಿಸೋಜ, ಮಂಗಳೂರು ತಾಲೂಕಿನ ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆ ಎನ್ನಿ ನಿರ್ಮಲ್ ಡಿಸೋಜ, ಮರಕಡ ಶಾಲೆಯ ಸರಿತ ಡಿಸೋಜ, ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ರಾಣಿಪುರ ಸರಕಾರಿ ಶಾಲೆಯ ಗ್ಲೋರಿಯಾ ಅನುಶಿಯ ಲೋಬೋ, ಅಂಬ್ಲಮೊಗರು ಸರಕಾರಿ ಶಾಲೆಯ ರೋಝಾ, ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಸರಕಾರಿ ಪ್ರೌಢಶಾಲೆಯ ವೆಂಕಟರಮಣ ಆಚಾರ್, ಕಾವಳಮೂಡೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯ ಸುರೇಖಾ ಗಣತಿಯ ವೇಳೆ ಅನಾರೋಗ್ಯಕ್ಕೀಡಾಗಿದ್ದರು.
ಈ ಸಂದರ್ಭ ಆಯಾ ತಾಲೂಕಿನ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರುಗಳು ಉಪಸ್ಥಿತರಿದ್ದರು.







